July 3, 2026

ಪ್ರಿಯಕರನ ಕಣ್ಣೆದುರೇ ಯುವತಿಯನ್ನು ಎಳೆದೊಯ್ದ ಮೊಸಳೆ: ಪ್ರಿಯಕರ ಜೀವದ ಹಂಗು ತೊರೆದು ರಕ್ಷಿಸಲು ಪ್ರಯತ್ನ

0
image_editor_output_image-10328421-1783058105955

ಒರ್ಲ್ಯಾಂಡೊ: ಅಮೇರಿಕಾದ ಫ್ಲೋರಿಡಾ ರಾಜ್ಯದಲ್ಲಿ ಮೊಸಳೆ ದಾಳಿಗೆ 31 ವರ್ಷದ ಯುವತಿ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ನದಿಯಲ್ಲಿ ಈಜುತ್ತಿದ್ದ ವೇಳೆ ಅಲಿಗೇಟರ್ ಏಕಾಏಕಿ ದಾಳಿ ನಡೆಸಿದ್ದು, ಪ್ರಿಯಕರ ಜೀವದ ಹಂಗು ತೊರೆದು ರಕ್ಷಿಸಲು ಪ್ರಯತ್ನಿಸಿದರೂ ಯುವತಿಯನ್ನು ಉಳಿಸಲು ಸಾಧ್ಯವಾಗಲಿಲ್ಲ.

ಮೃತ ಯುವತಿಯನ್ನು ಬ್ರಿಟಾನಿ ಕ್ಲಾರ್ಕ್ ಎಂದು ಗುರುತಿಸಲಾಗಿದೆ. ಜೂನ್ 28ರಂದು ಅವರು ತಮ್ಮ ಗೆಳೆಯ ಚಾನ್ಸ್ ಆಲಿಸನ್ ಹಾಗೂ ಮತ್ತೊಬ್ಬ ಸ್ನೇಹಿತನೊಂದಿಗೆ ಒರ್ಲ್ಯಾಂಡೊ ಸಮೀಪದ ಲಿಟಲ್ ಬಿಗ್ ಎಕಾನ್ ಸ್ಟೇಟ್ ಫಾರೆಸ್ಟ್ ಪ್ರದೇಶಕ್ಕೆ ಪಾದಯಾತ್ರೆಗೆ ತೆರಳಿದ್ದರು. ಬಳಿಕ ಮೂವರು ಎಕಾನ್ಲಾಕ್‌ಹ್ಯಾಚೀ ನದಿಯ ಕೇವಲ ಮೂರು ಅಡಿ ಆಳದ ನೀರಿನಲ್ಲಿ ಈಜುತ್ತಿದ್ದ ವೇಳೆ ಬೃಹತ್ ಅಲಿಗೇಟರ್ ಬ್ರಿಟಾನಿ ಮೇಲೆ ದಾಳಿ ನಡೆಸಿದೆ.

ಮೊಸಳೆ ಮೊದಲಿಗೆ ಯುವತಿಯ ಒಂದು ತೋಳನ್ನು ಕಚ್ಚಿ ಹಿಡಿದು ನೀರಿನೊಳಗೆ ಎಳೆದುಕೊಂಡು ಹೋಗಿದೆ. ಬಳಿಕ ವೇಗವಾಗಿ ಸುತ್ತು ಹೊಡೆಯಲು ಆರಂಭಿಸಿದೆ. ಯುವತಿಯನ್ನು ರಕ್ಷಿಸಲು ನೀರಿಗೆ ಧುಮುಕಿದ ಆಕೆಯ ಪ್ರಿಯಕರ ಚಾನ್ಸ್ ಆಲಿಸನ್, ಅಪಾರ ಧೈರ್ಯ ಪ್ರದರ್ಶಿಸಿ ಮೊಸಳೆಯ ಬಾಯಿಂದ ಬ್ರಿಟಾನಿಯ ಒಂದು ಕೈಯನ್ನು ಬಿಡಿಸುವಲ್ಲಿ ಯಶಸ್ವಿಯಾದರು. ಆದರೆ ಅಷ್ಟರಲ್ಲೇ ಮೊಸಳೆ ಮತ್ತೊಂದು ಕೈಯನ್ನು ಕಚ್ಚಿ ಹಿಡಿದಿತ್ತು. ಕೊನೆಗೆ ಮೊಸಳೆ ಹಿಡಿತ ಸಡಿಲಿಸಿದ ಬಳಿಕ ಚಾನ್ಸ್ ಆಲಿಸನ್ ಬ್ರಿಟಾನಿಯನ್ನು ದಡಕ್ಕೆ ಎಳೆದುಕೊಂಡು ಬಂದು ತುರ್ತು ಜೀವ ರಕ್ಷಕ ಚಿಕಿತ್ಸೆ (CPR) ನೀಡಲು ಪ್ರಯತ್ನಿಸಿದರು. ಆದರೆ ಎರಡೂ ತೋಳುಗಳಿಗೆ ತೀವ್ರ ಗಾಯಗಳಾಗಿದ್ದರಿಂದ ಭಾರೀ ರಕ್ತಸ್ರಾವ ಉಂಟಾಯಿತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಬ್ರಿಟಾನಿ ಕೊನೆಯುಸಿರೆಳೆದರು.

ಘಟನೆಯ ನಂತರ ಫ್ಲೋರಿಡಾ ವನ್ಯಜೀವಿ ಸಂರಕ್ಷಣಾ ಆಯೋಗ ಸ್ಥಳಕ್ಕೆ ದೌಡಾಯಿಸಿ, 12 ಅಡಿ ಮತ್ತು 13 ಅಡಿ ಉದ್ದದ ಎರಡು ಬೃಹತ್ ಅಲಿಗೇಟರ್‌ಗಳನ್ನು ಸೆರೆಹಿಡಿದಿದೆ. ಯುವತಿ ಮೇಲೆ ದಾಳಿ ನಡೆಸಿದ್ದು ಇದೇ ಅಲಿಗೇಟರ್‌ಗಳೇ ಎಂಬುದನ್ನು ದೃಢಪಡಿಸಲು ಅವುಗಳ ಡಿಎನ್‌ಎ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

ವನ್ಯಜೀವಿ ತಜ್ಞರ ಪ್ರಕಾರ, ಏಪ್ರಿಲ್‌ನಿಂದ ಅಲಿಗೇಟರ್‌ಗಳ ಸಂತಾನೋತ್ಪತ್ತಿ ಅವಧಿ ಆರಂಭವಾಗುತ್ತದೆ. ಈ ಸಮಯದಲ್ಲಿ ಅವು ಹೆಚ್ಚು ಆಕ್ರಮಣಕಾರಿ ಸ್ವಭಾವ ಪ್ರದರ್ಶಿಸುತ್ತವೆ. ಜೊತೆಗೆ ನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದು ಮತ್ತು ಪ್ರಾದೇಶಿಕ ವರ್ತನೆಯೂ ಇಂತಹ ದಾಳಿಗಳಿಗೆ ಕಾರಣವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಫ್ಲೋರಿಡಾದ ಸರೋವರಗಳು ಹಾಗೂ ನದಿಗಳಲ್ಲಿ ಅಲಿಗೇಟರ್ ದಾಳಿಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಿಹಿನೀರಿನ ಜಲಮೂಲಗಳ ಬಳಿ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ವನ್ಯಜೀವಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!