ಅಮರೀಂದರ್ ಸಿಂಗ್ ನಿಂದ ಹೊಸ ಪಕ್ಷದ ಘೋಷಣೆ ಸಾಧ್ಯತೆ

ನವದೆಹಲಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಶೀಘ್ರದಲ್ಲೇ ತಮ್ಮದೇ ಆದ ರಾಜಕೀಯ ಪಕ್ಷವನ್ನು ಕಟ್ಟುವುದಾಗಿ ಬಹಿರಂಗಪಡಿಸಿದ್ದಾರೆ. ಅಲ್ಲದೇ ಅವರು ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ದೀರ್ಘಕಾಲದ ಆಂದೋಲನವು ಶೀಘ್ರದಲ್ಲೇ ಮುಗಿಯಲಿದೆ ಎಂದು ಪಂಜಾಬ್ ಮಾಜಿ ಸಿಎಂ ಸುಳಿವು ನೀಡಿದ್ದಾರೆ.
ಪಂಜಾಬ್ನ ಉತ್ತಮ ಭವಿಷ್ಯಕ್ಕಾಗಿ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ನನ್ನ ಹೊಸ ರಾಜಕೀಯ ಪಕ್ಷವನ್ನು ಶೀಘ್ರ ಘೋಷಿಸುತ್ತೇನೆ. ಪಂಜಾಬ್ ರಾಜ್ಯ ಮತ್ತು ಅದರ ಜನರ ಹಿತಾಸಕ್ತಿಗಳನ್ನು ಕಾಪಾಡುತ್ತೇನೆ. ಕಳೆದ ಒಂದು ವರ್ಷಗಳಿಂದ ಉಳಿವಿಗಾಗಿ ಹೋರಾಡುತ್ತಿರುವ ರೈತರ ಪರವಾಗಿ ನಿಲ್ಲುತ್ತೇನೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ರೈತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಅಮರೀಂದರ್ ಸಿಂಗ್ ಅವರ ನಿರ್ಧಾರವು ಕೃಷಿ ಕಾನೂನು ಸಮಸ್ಯೆಗೆ ನೀಡುವ ಪರಿಹಾರದ ಮೇಲೆ ಅವಲಂಬಿಸಿರುತ್ತದೆ ಎಂದು ತಿಳಿದುಬಂದಿದೆ.