ಉತ್ತರಾಖಂಡದಲ್ಲಿ ಭಾರಿ ಮಳೆಯ ಅಬ್ಬರ: ಸಾವಿನ ಸಂಖ್ಯೆ 28ಕ್ಕೆ ಏರಿಕೆ
ಉತ್ತರಾಖಂಡ: ವಿವಿಧ ಭಾಗಗಳಲ್ಲಿ ಭಾರಿ ಮಳೆಯ ಅಬ್ಬರ ಮಂಗಳವಾರವೂ ಮುಂದುವರಿದಿದೆ. ಮಳೆಯ ಹೊಡೆತಕ್ಕೆ ಮಂಗಳವಾರ 23 ಮಂದಿ ಬಲಿಯಾಗಿದ್ಧಾರೆ. ಎರಡು ದಿನಗಳಲ್ಲಿ ಮಳೆಯಿಂದಾದ ಸಾವಿನ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.
ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಮಳೆ ಮುಂದುವರಿದಿದೆ. ಫತೇಪುರ ಜಿಲ್ಲೆಯಲ್ಲಿ ಮನೆಯೊಂದು ಕುಸಿದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಬೇರೆಡೆ ಇತರ ಇಬ್ಬರು ಮೃತಪಟ್ಟಿದ್ದಾರೆ. ವಾಯುಭಾರ ಕುಸಿತದಿಂದಾಗಿ ಭಾರಿ ಮಳೆಯಿಂದ ಸಮಸ್ಯೆಗೆ ಒಳಗಾಗಿದ್ದ ಒಡಿಶಾದಲ್ಲಿ ಇನ್ನೆರಡು ದಿನ ಮಳೆ ಸುರಿಯಲಿದೆ ಎಂಬ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಒಡಿಶಾದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ರಾಜಸ್ಥಾನದಲ್ಲಿಯೂ ಮತ್ತೆ ಮಳೆ ಬೀಳುವ ಮುನ್ಸೂಚನೆಯನ್ನು ಇಲಾಖೆ ಕೊಟ್ಟಿದೆ.
ಉತ್ತರಾಖಂಡದ ಪ್ರವಾಸಿತಾಣ ನೈನಿತಾಲ್, ರಾಜ್ಯದ ಇತರ ಭಾಗಗಳಿಂದ ಸಂಪರ್ಕ ಕಡಿದು
ಕೊಂಡಿದೆ. ನೈನಿತಾಲ್ ಸಂಪರ್ಕಿಸುವ ಮೂರು ರಸ್ತೆಗಳಲ್ಲಿ ಭೂಕುಸಿತವಾಗಿದೆ.
ರಾಜ್ಯದ ಹಲವೆಡೆ ಭೂಕುಸಿತ ಸಂಭವಿಸಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಹಲವರು ಸಿಲುಕಿರಬಹುದು. ಹಾಗಾಗಿ, ಸಾವಿನ ಸಂಖ್ಯೆ ಹೆಚ್ಚಬಹುದು ಎಂಬ ಭೀತಿಯನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವ್ಯಕ್ತಪಡಿಸಿದ್ದಾರೆ.