October 10, 2026

ಬಂಟ್ವಾಳ: ಮಾದಕ ದ್ರವ್ಯ ಮಾರಾಟ: ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪ ಆರೋಪಿಯ ಬಂಧನ

0
image_editor_output_image-927118360-1791613777897

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ 84 ವರ್ಷದ ವ್ಯಕ್ತಿಯೊಬ್ಬನನ್ನು ಕಲ್ಲಿಗೆ ಗ್ರಾಮದ ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಒಟ್ಟು 1.93 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಯನ್ನು ಪುದು ಗ್ರಾಮದ ಅಮ್ಮೆಮ್ಮಾರ್ ಮೂಲದ, ಪ್ರಸ್ತುತ ಫರಂಗಿಪೇಟೆಯ ಟಿ.ಕೆ. ಫ್ಲ್ಯಾಟ್‌ನಲ್ಲಿ ವಾಸಿಸುತ್ತಿರುವ ಅಶ್ರಫ್ ಅಲಿಯಾಸ್ ಮೊಹಮ್ಮದ್ ಅಶ್ರಫ್ (48) ಎಂದು ಗುರುತಿಸಲಾಗಿದೆ.

 

ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಅವರ ನೇತೃತ್ವದ ಪೊಲೀಸ್ ತಂಡ ಸ್ಥಳದ ಮೇಲೆ ದಾಳಿ ನಡೆಸಿದೆ. ಪೊಲೀಸರನ್ನು ಕಂಡು ಅಶ್ರಫ್ ಪರಾರಿಯಾಗಲು ಯತ್ನಿಸಿದನಾದರೂ, ಆತನನ್ನು ವಶಕ್ಕೆ ಪಡೆದ ಪೊಲೀಸರು ತಪಾಸಣೆ ನಡೆಸಿದ್ದಾರೆ.

ಆರೋಪಿಯ ಪ್ಯಾಂಟ್ ಜೇಬಿನಲ್ಲಿ ಬಿಳಿ ಬಣ್ಣದ ಪೌಡರ್ ಹೊಂದಿದ್ದ ನಾಲ್ಕು ಪ್ಯಾಕೆಟ್‌ಗಳು ಹಾಗೂ ಆತನ ಸ್ಕೂಟರ್ ಸೀಟ್‌ನಡಿಯಲ್ಲಿ ಐದು ಪ್ಯಾಕೆಟ್‌ಗಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯಲ್ಲಿ ಇದು ‘ಆಂಫಿಟಮೈನ್/ಮೆಥಾಂಫಿಟಮೈನ್’ ಮಾದರಿಯ ಮಾದಕ ದ್ರವ್ಯವಿರಬಹುದು ಎಂದು ಶಂಕಿಸಲಾಗಿದೆ.

ಸಂಶಯಾಸ್ಪದ ಮಾದಕ ವಸ್ತುವಿನ ಜೊತೆಗೆ ಆರೋಪಿಯಿಂದ ಎರಡು ಮೊಬೈಲ್ ಫೋನ್‌ಗಳು, 1,870 ರೂ. ನಗದು, ಡೆಬಿಟ್ ಕಾರ್ಡ್, ಎಂಟು ಖಾಲಿ ಜಿಪ್-ಲಾಕ್ ಕವರ್‌ಗಳು, ತೂಕದ ಯಂತ್ರ ಹಾಗೂ ಸ್ಕೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯವನ್ನು ಸುಮಾರು 1.93 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!