November 28, 2026

ಮಂಗಳೂರು: ಫಾರ್ಚುನರ್ ಕಾರು ಢಿಕ್ಕಿ; ಆಲ್ಟೊ ಕಾರು ಚಾಲಕ ಸಾವು

89072fdb-7d97-47cc-b1c7-36e8b651d8d5

ಮಂಗಳೂರು: ಪಾರ್ಚೂನರ್ ಕಾರು ಮತ್ತು ಆಲ್ಟೋ ಕಾರು ನಡುವೆ ನಗರದ ಉರ್ವ ಮಾರಿಗುಡಿ ಸಮೀಪ ನಿನ್ನೆ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಲ್ಟೊ ಕಾರು ಚಾಲಕರೊಬ್ಬರು ಮೃತಪಟ್ಟಿದ್ದಾರೆ.

ಉರ್ವ ಗಾಂಧಿನಗರದ ಸರ್ಕಾರಿ ಶಾಲೆಯ ಬಳಿ ನಿಲ್ಲಿಸಿದ್ದ ಆಲ್ಟೋ ಕಾರಿನಲ್ಲಿ ಕಣ್ಣೂರು ಮೂಲದ ಜಿತೇಂದ್ರ (41) ಎಂಬವರು ಮಾತ್ರ ಕುಳಿತಿದ್ದರು. ಈ ವೇಳೆ, ಅತಿ ವೇಗದಿಂದ ಬಂದ ಫಾರ್ಚುನರ್ ಕಾರು ನೇರವಾಗಿ ಡಿಕ್ಕಿಯಾಗಿದ್ದು ಬಳಿಕ ಮರ ಮತ್ತು ಕಾಂಪೌಂಡ್ ಗೋಡೆಗೂ ಬಡಿದು ನಿಂತಿದೆ. ಅಪಘಾತದ ತೀವ್ರತೆಗೆ ಆಲ್ಟೋ ಕಾರು ಮೇಲಕ್ಕೆ ಚಿಮ್ಮಿ ಕಾಂಪೌಂಡ್ ಗೋಡೆಯ ಎಡೆಯಲ್ಲಿ ಬಿದ್ದಿದೆ. ಚಾಲಕ ಜಿತೇಂದ್ರ ಗಂಭೀರ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ, ಅಷ್ಟರಲ್ಲಿ ಮೃತಪಟ್ಟಿದ್ದಾರೆ.

ಜಿತೇಂದ್ರ ಮತ್ತು ಇತರ ಇಬ್ಬರು ಸ್ನೇಹಿತರೊಂದಿಗೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದು ನಿನ್ನೆ ಸಂಜೆ ಉರ್ವಾದ ಕೊರಗಜ್ಜನ ಕಟ್ಟೆಗೆ ನಮಿಸಲು ಬಂದಿದ್ದರು. ಆಲ್ಟೋ ಕಾರು ಸ್ನೇಹಿತ ಶರತ್ ಎಂಬವರದ್ದಾಗಿದ್ದು ಇವರು ಕಾರಿನಿಂದ ಇಳಿದು ಚಾರ್ಜರ್ ಖರೀದಿಗಾಗಿ ಪಕ್ಕದ ಮೊಬೈಲ್ ಅಂಗಡಿಗೆ ತೆರಳಿದ್ದರು. ಅಷ್ಟರಲ್ಲಿ ಫಾರ್ಚುನರ್ ಕಾರು ಡಿಕ್ಕಿಯಾಗಿ ದುರಂತ ಸಂಭವಿಸಿದೆ.

error: Content is protected !!