ರಿಯಾದ್ ವಿಮಾನ ನಿಲ್ದಾಣಗಳ ಮೇಲೆ ಹೌತಿ ಬಂಡುಕೋರರಿಂದ ದಾಳಿ: ವಿಮಾನಗಳ ಹಾರಾಟ ರದ್ದು
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಏರ್ ಇಂಡಿಯಾ, ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗಳು ರಿಯಾದ್‌ಗೆ ಹಾಗೂ ರಿಯಾದ್‌ನಿಂದ ಹೊರಡುವ ವಿಮಾನಗಳ ಹಾರಾಟವನ್ನು ಅಕ್ಟೋಬರ್ 10ರವರೆಗೆ ರದ್ದುಗೊಳಿಸಿವೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ರದ್ದಾದ ವಿಮಾನಗಳ ಪ್ರಯಾಣಿಕರಿಗೆ ಪೂರ್ಣ ಮರುಪಾವತಿ ಅಥವಾ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರಯಾಣ ಮರುನಿಗದಿ ಮಾಡುವ ಅವಕಾಶ ನೀಡಲಾಗುತ್ತಿದೆ.
ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 10ರವರೆಗೆ ರಿಯಾದ್‌ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ’ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ. ಜರ್ಮನಿಯ ಲುಫ್ಥಾನ್ಸಾ ಗ್ರೂಪ್ ಕೂಡ ಮಧ್ಯಪ್ರಾಚ್ಯದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಿಯಾದ್‌ಗೆ ತನ್ನ ವಿಮಾನಗಳ ಹಾರಾಟವನ್ನು ಅಕ್ಟೋಬರ್ 16ರವರೆಗೆ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ಗುರುವಾರ ಮುಂಜಾನೆ ಹಲವು ಸ್ಫೋಟಗಳ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಮಹತ್ವದ ಸೂಚನೆ ನೀಡಿದೆ. ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಿ, ತಮ್ಮ ವಿಮಾನದ ಸ್ಥಿತಿಯನ್ನು ಖಚಿತಪಡಿಸಿಕೊಳ್ಳುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ. ಗುರುವಾರ ಮುಂಜಾನೆ ರಿಯಾದ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ವಿಮಾನವೊಂದರಿಂದ ಹೊಗೆ ಏರುತ್ತಿರುವುದು ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇತ್ತೀಚಿನ ದಿನಗಳಲ್ಲಿ ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು, ಸೇನಾ ನೆಲೆಗಳು ಹಾಗೂ ತೈಲ ಸೌಲಭ್ಯಗಳ ಮೇಲೆ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.
ಗುರುವಾರ ರಿಯಾದ್ ವಿಮಾನ ನಿಲ್ದಾಣದ ಮೇಲೆ ಎರಡು ಕ್ಷಿಪಣಿಗಳು, ನಜ್ರಾನ್ ವಿಮಾನ ನಿಲ್ದಾಣದ ಮೇಲೆ ಒಂದು ಕ್ಷಿಪಣಿ ಹಾಗೂ ಖಾಮಿಸ್ ಮುಷೈತ್‌ನ ವಾಯುನೆಲೆಯತ್ತ ಮತ್ತೊಂದು ಕ್ಷಿಪಣಿ ಉಡಾಯಿಸಲಾಗಿದೆ ಎಂದು ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ ಹೇಳಿರುವುದಾಗಿ ವರದಿಯಾಗಿದೆ. ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟವು ಕೆಲವು ಕ್ಷಿಪಣಿಗಳನ್ನು ಪ್ರತಿಬಂಧಿಸಿರುವುದಾಗಿ ಈ ಹಿಂದೆ ತಿಳಿಸಿತ್ತು. ಸೌದಿ ವಾಯುಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಜಾಗತಿಕ ವಿಮಾನಯಾನ ಸಂಸ್ಥೆಗಳಿಗೆ ಹೌತಿಗಳು ಮತ್ತೊಮ್ಮೆ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ರಿಯಾದ್‌ಗೆ ಗುರುವಾರ ಸಂಜೆ ತೆರಳಬೇಕಿದ್ದ ಹಲವು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದಾಗಿದೆ ಎಂದು ಫ್ಲೈಟ್‌ರಾಡಾರ್24 ದತ್ತಾಂಶ ತಿಳಿಸಿದೆ. ಸಿರಿಯಮ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಗುರುವಾರ 1500 GMT ವೇಳೆಗೆ ರಿಯಾದ್ ವಿಮಾನ ನಿಲ್ದಾಣದ ಒಟ್ಟು ನಿರ್ಗಮನಗಳಲ್ಲಿ ಶೇ 49.7ರಷ್ಟು ರದ್ದಾಗಿದ್ದವು. ಸೌದಿ ಅರೇಬಿಯಾದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಶುಕ್ರವಾರವೂ 31 ವಿಮಾನಗಳ ರದ್ದು ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ ಬುಧವಾರ ರಿಯಾದ್ ಮತ್ತು ಅಭಾ ವಿಮಾನ ನಿಲ್ದಾಣಗಳ ಮೇಲೆ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದರು. ಬಂಡುಕೋರರ ವಿರುದ್ಧ ಸೌದಿ ಅರೇಬಿಯಾ ಹಾಗೂ ಮಿತ್ರ ಯೆಮೆನ್ ಪಡೆಗಳು ಪ್ರಮುಖ ಭೂ ಮತ್ತು ವಾಯು ಕಾರ್ಯಾಚರಣೆ ಆರಂಭಿಸಿದ ಬಳಿಕ ಸಂಭವಿಸಿದ ಮೊದಲ ಸಾವು ಇದಾಗಿದೆ ಎಂದು ವರದಿಯಾಗಿದೆ.






