ರೈಲಿನ ಎಸಿ ಬೋಗಿಯೊಳಗೆ ದೀಪ ಹಚ್ಚಿ ಶಂಖ ಊದಿ ಅಯ್ಯಪ್ಪ ಸ್ವಾಮಿಯ ಪೂಜೆ: ವಿಡಿಯೊ ವೈರಲ್
ನವದೆಹಲಿ: ಚಲಿಸುತ್ತಿದ್ದ ರೈಲಿನ ಹವಾನಿಯಂತ್ರಿತ ಬೋಗಿಯೊಳಗೆ ವ್ಯಕ್ತಿಯೊಬ್ಬರು ಶಂಖ ಊದಿ, ಎಣ್ಣೆ ದೀಪ ಹಚ್ಚಿ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ರೈಲು ಪ್ರಯಾಣಿಕರ ಸುರಕ್ಷತೆ ಕುರಿತು ತೀವ್ರ ಆತಂಕಕ್ಕೆ ಕಾರಣವಾಗಿದೆ. ‘ಗಾಡ್ ಆಫ್ ವಾರ್’ ಎಂಬ ಹೆಸರಿನ ‘ಎಕ್ಸ್’ (X) ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ.
ವಿಡಿಯೊದಲ್ಲಿ ವ್ಯಕ್ತಿಯೊಬ್ಬರು ಬೋಗಿಯ ಆಸನದಲ್ಲಿ ಕುಳಿತು ಅಂಗಿ ಧರಿಸದೆ ಧೋತಿ ಉಟ್ಟಿದ್ದು, ಹಣೆ ಹಾಗೂ ಮೈಮೇಲೆ ವಿಭೂತಿ ಬಳಿದುಕೊಂಡಿರುವುದು ಕಂಡುಬರುತ್ತದೆ.
ಅವರ ಮುಂಭಾಗದ ಟೇಬಲ್ ಮೇಲೆ ಹೂವು ಮತ್ತು ಚೆಂಡು ಹೂವಿನ ಹಾರಗಳಿಂದ ಅಲಂಕರಿಸಿದ ದೇವರ ಫೋಟೋ ಇರಿಸಲಾಗಿದೆ. ಪೂಜಾ ಸಾಮಗ್ರಿಗಳ ತಟ್ಟೆಗಳ ಜೊತೆಗೆ ಉರಿಯುತ್ತಿರುವ ಎಣ್ಣೆ ದೀಪವೂ ಮೇಜಿನ ಮೇಲಿದೆ. ಮೊದಲು ಶಂಖ ಊದುವ ಆ ವ್ಯಕ್ತಿ, ಬಳಿಕ ಉರಿಯುತ್ತಿರುವ ದೀಪದಿಂದ ಆರತಿ ಬೆಳಗಿ ಪೂಜೆ ನೆರವೇರಿಸುತ್ತಾರೆ. ಕಿಟಕಿಯ ಮೂಲಕ ಹೊರಗಿನ ದೃಶ್ಯಗಳು ವೇಗವಾಗಿ ಚಲಿಸುತ್ತಿರುವುದು ಕಾಣಿಸುತ್ತಿದ್ದು, ರೈಲು ಚಲಿಸುತ್ತಿರುವಾಗಲೇ ಈ ಪೂಜೆ ನಡೆದಿರುವುದು ಸ್ಪಷ್ಟವಾಗಿದೆ.
ಇತರ ಪ್ರಯಾಣಿಕರೂ ಇರುವ ಸೀಮಿತ ಸ್ಥಳದಲ್ಲಿ, ಅದರಲ್ಲೂ ಹವಾನಿಯಂತ್ರಿತ ಬೋಗಿಯೊಳಗೆ ಬೆಂಕಿ (ಉರಿಯುವ ದೀಪ) ಬಳಸಿರುವುದು ಭಾರಿ ಅಪಾಯಕ್ಕೆ ಆಹ್ವಾನ ನೀಡಿದಂತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಲಿಸುವ ರೈಲಿನಲ್ಲಿ ಇಂತಹ ಅಪಾಯಕಾರಿ ಆಚರಣೆಗೆ ಹೇಗೆ ಅವಕಾಶ ನೀಡಲಾಯಿತು ಹಾಗೂ ರೈಲ್ವೆ ಸಿಬ್ಬಂದಿ ಇದನ್ನು ಗಮನಿಸಿರಲಿಲ್ಲವೇ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಶ್ನಿಸಿದ್ದಾರೆ.
ವೈರಲ್ ವಿಡಿಯೊ ಕುರಿತ ‘ಎಕ್ಸ್’ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ‘ರೈಲ್ವೆ ಸೇವಾ’ (RailwaySeva), ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಘಟನೆ ನಡೆದ ದಿನಾಂಕ, ಸಮಯ, ರೈಲು ಸಂಖ್ಯೆ, ಪಿಎನ್‌ಆರ್ (PNR) ಅಥವಾ ಯುಟಿಎಸ್ (UTS) ಸಂಖ್ಯೆ ಹಾಗೂ ದೂರುದಾರರ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳುವಂತೆ ಕೋರಿದೆ. ಅಲ್ಲದೆ, ಇಂತಹ ಘಟನೆಗಳ ಕುರಿತು ತಕ್ಷಣದ ನೆರವಿಗಾಗಿ ‘ರೈಲ್‌ಮದದ್’ (RailMadad) ವೆಬ್‌ಸೈಟ್ ಅಥವಾ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಿ ದೂರು ದಾಖಲಿಸುವಂತೆ ಸೂಚಿಸಿದೆ.




