ಕಾಲೇಜಿನ ಹೊರಭಾಗದಲ್ಲಿ ಟೆಂಪೋ ಢಿಕ್ಕಿ: ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತ್ಯು,ಇಬ್ಬರು ಗಂಭೀರ
ಪುಣೆ: ಕಾಲೇಜಿನ ಹೊರಭಾಗದ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ಗುಂಪಿನ ಮೇಲೆ ನಿಯಂತ್ರಣ ತಪ್ಪಿದ ಟೆಂಪೋವೊಂದು ಹರಿದ ಪರಿಣಾಮ, ಓರ್ವ ವಿದ್ಯಾರ್ಥಿನಿ ಸೇರಿದಂತೆ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಬೋಪ್ದೇವ್ ಘಾಟ್ ಪ್ರದೇಶದಲ್ಲಿರುವ ಕೆ.ಜೆ. ಶಿಕ್ಷಣ ಸಂಸ್ಥೆಯ ಮುಂಭಾಗ ಮಧ್ಯಾಹ್ನ 2.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಟೆಂಪೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಸಿದ್ಧೇಶ್ ರಾಜೇ, ವಿಶಾಲ್ ದಾಂಗ್ಡೆ ಹಾಗೂ ಮೋಹಿನಿ ಚೌಧರಿ ಮೃತಪಟ್ಟ ದುರ್ದೈವಿಗಳು. ಗಾಯಗೊಂಡಿರುವ ಶ್ವೇತಾ ತಾಲೇಕರ್ ಮತ್ತು ಸೋಹಮ್ ಘಂಗಲೆ ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ‘‘ಪ್ರಾಥಮಿಕ ತನಿಖೆಯ ಪ್ರಕಾರ, ಬೋಪ್ದೇವ್ ಘಾಟ್‌ನ ಇಳಿಜಾರಿನ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಟೆಂಪೋ ಮೊದಲು ಮುಂದೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ, ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಹರಿದಿದೆ’’ ಎಂದು ಯೆವಾಲೆವಾಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಾರುತಿ ಪಾಟೀಲ್ ತಿಳಿಸಿದ್ದಾರೆ.
‘‘ಮೃತಪಟ್ಟ ವಿದ್ಯಾರ್ಥಿಗಳು ಎರಡನೇ ಮತ್ತು ಮೂರನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಪರೀಕ್ಷೆ ಬರೆದು ಕಾಲೇಜಿನಿಂದ ಮನೆಗೆ ಮರಳಲು ನಿಯಮಿತವಾಗಿ ಬಳಸುವ ಪಿಎಂಪಿಎಂಎಲ್ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಅವರು ರಸ್ತೆಯ ಮೇಲೆ ನಿಂತಿರಲಿಲ್ಲ; ಚಾಲಕನ ಅತಿ ವೇಗ ಮತ್ತು ದುಡುಕಿನ ಚಾಲನೆಯಿಂದಾಗಿ ಯಾವುದೇ ತಪ್ಪಿಲ್ಲದ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ’’




