ಮನೆಯಲ್ಲಿ ತಾವೇ ತಯಾರಿಸಿದ ನೂಡಲ್ಸ್ ಸೇವಿಸಿದ ಬಾಲಕಿ ಮೃತ್ಯು
ಜೈಪುರ: ಮನೆಯಲ್ಲಿ ತಾವೇ ತಯಾರಿಸಿಕೊಂಡ ನೂಡಲ್ಸ್ ಸೇವಿಸಿದ ಪರಿಣಾಮ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಆಕೆಯ ಅಕ್ಕ ತೀವ್ರ ಅಸ್ವಸ್ಥಗೊಂಡಿರುವ ದಾರುಣ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಪ್ರಾಥಮಿಕ ತನಿಖೆಯಲ್ಲಿ ಆಹಾರ ವಿಷವಾಗಿರುವ ಶಂಕೆ ವ್ಯಕ್ತವಾಗಿದೆ. ಪಿಹು ಕುಮಾವತ್ (7) ಮೃತ ದುರ್ದೈವಿ ಬಾಲಕಿ. ಆಕೆಯ ಸಹೋದರಿ ದಿವ್ಯಾಂಶಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.ವಿಷ ಸುರಕ್ಷತೆ
ಕಳೆದ ನವೆಂಬರ್ 19ರಂದು ಮನೆಯಲ್ಲಿ ಪೋಷಕರು ಇಲ್ಲದ ವೇಳೆ ಪಿಹು ಮತ್ತು ದಿವ್ಯಾಂಶಿ ತಾವೇ ನೂಡಲ್ಸ್ ತಯಾರಿಸಿಕೊಂಡು ಸೇವಿಸಿದ್ದಾರೆ. ಬಳಿಕ ಇಬ್ಬರೂ ನಿದ್ರೆಗೆ ಜಾರಿದ್ದಾರೆ. ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ತಾಯಿ ಮನೆಗೆ ಮರಳಿದಾಗ, ಅಕ್ಕ ದಿವ್ಯಾಂಶಿ ಎಚ್ಚರಗೊಂಡಿದ್ದು ತೀವ್ರ ಅಸ್ವಸ್ಥಳಾಗಿದ್ದಳು. ಆದರೆ, ತಂಗಿ ಪಿಹು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ತಕ್ಷಣವೇ ಗಾಬರಿಗೊಂಡ ಕುಟುಂಬಸ್ಥರು ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಪಿಹು ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಅಸ್ವಸ್ಥಗೊಂಡಿದ್ದ ದಿವ್ಯಾಂಶಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮೃತ ಬಾಲಕಿಯ ಕುಟುಂಬಸ್ಥರು ಕರಧನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮನೆಯಲ್ಲಿ ಉಳಿದಿದ್ದ ನೂಡಲ್ಸ್ ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಪ್ರಾಥಮಿಕ ಹಂತದಲ್ಲಿ ಫುಡ್ ಪಾಯಿಸನ್ ಶಂಕೆ ವ್ಯಕ್ತವಾಗಿದ್ದರೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಬಾಲಕಿಯ ಸಹೋದರ ಗೋವಿಂದ್ ಅನಾರೋಗ್ಯದ ಕಾರಣ ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ನಡುವೆ ಪುತ್ರಿಯ ಅಕಾಲಿಕ ಸಾವು ಕುಟುಂಬಕ್ಕೆ ಬರಸಿಡಿಲಿನಂತೆ ಎರಗಿದೆ.




