ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಗದರಿಸಿದ ಪೋಷಕರು: ಮನನೊಂದ 11 ವರ್ಷದ ಬಾಲಕ ಆತ್ಮಹತ್ಯೆ
ಕೊಲ್ಲಂ: ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಪೋಷಕರು ಗದರಿಸಿದರು ಎಂಬ ಕಾರಣಕ್ಕೆ ಮನನೊಂದ 11 ವರ್ಷದ ಬಾಲಕನೊಬ್ಬ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.
ನೆಡುಮೊಂಕಾವು ನಿವಾಸಿಗಳಾದ ಅನಿಲ್‌ಕುಮಾರ್ ಮತ್ತು ರೇಷ್ಮಾ ದಂಪತಿಯ ಪುತ್ರ ದೇವದರ್ಶ್ ಮೃತ ದುರ್ದೈವಿ. ಈತ ಕೆಎನ್‌ಎಸ್ ಸೆಂಟ್ರಲ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಶುಕ್ರವಾರ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ದೇವದರ್ಶ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದನು. ಈ ವಿಚಾರ ಪೋಷಕರಿಗೆ ತಿಳಿಯಬಾರದೆಂದು ಪ್ರಗತಿ ಪತ್ರಕ್ಕೆ (Progress Card) ಬಾಲಕನೇ ಪೋಷಕರ ಸಹಿ ಹಾಕಿದ್ದನು. ಇದನ್ನು ಗಮನಿಸಿದ ಶಾಲಾ ಶಿಕ್ಷಕರು ಪೋಷಕರಿಗೆ ವಿಷಯ ತಿಳಿಸಿದ್ದರು.
ಈ ವಿಚಾರವಾಗಿ ಪೋಷಕರು ದೇವದರ್ಶ್‌ನನ್ನು ಗದರಿಸಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ಮನನೊಂದ ಬಾಲಕ, ತನ್ನ ಕೋಣೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೂಯಪಲ್ಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಬಾಲಕನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಅಂತ್ಯಕ್ರಿಯೆ ನೆರವೇರಿಸಲಾಗಿದೆ.




