November 23, 2026

ಸಾರ್ವಜನಿಕರ ತೀವ್ರ ವಿರೋಧ: ಆರಿಕ್ಕಾಡಿ ಕಡವತ್ ಟೋಲ್ ಪ್ಲಾಝಾ ನೆಲಸಮ

0
image_editor_output_image11650459-1795420196070

ಕಾಸರಗೋಡು: ಸಾರ್ವಜನಿಕರ ತೀವ್ರ ವಿರೋಧ ಹಾಗೂ ನ್ಯಾಯಾಂಗ ಹೋರಾಟದ ಫಲವಾಗಿ ರದ್ದಾಗಿದ್ದ ಆರಿಕ್ಕಾಡಿ ಕಡವತ್ ಟೋಲ್ ಪ್ಲಾಝಾವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಇದೀಗ ನೆಲಸಮಗೊಳಿಸಲು ಮುಂದಾಗಿದೆ. ಟೋಲ್ ಗೇಟ್ ತೆರವು ಕಾರ್ಯ ಆರಂಭವಾಗಿರುವುದು ಸ್ಥಳೀಯರು ಹಾಗೂ ವಾಹನ ಸವಾರರಲ್ಲಿ ನೆಮ್ಮದಿ ಮೂಡಿಸಿದೆ.

ತಲಪಾಡಿ ಟೋಲ್ ಪ್ಲಾಝಾದಿಂದ ಕೇವಲ 23 ಕಿ.ಮೀ. ದೂರದಲ್ಲೇ ಆರಿಕ್ಕಾಡಿ ಟೋಲ್ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಚೆಂಗಳ-ನೀಲೇಶ್ವರ ಹೆದ್ದಾರಿ ವ್ಯಾಪ್ತಿಯ ಪೆರಿಯ ಚಾಲಿಂಗಾಲ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೂ, ತಾತ್ಕಾಲಿಕ ನೆಪದಲ್ಲಿ ಈ ಟೋಲ್ ಪ್ಲಾಝಾವನ್ನು ಆರಂಭಿಸಲಾಗಿತ್ತು. ಇದನ್ನು ವಿರೋಧಿಸಿ ಶಾಸಕ ಎ.ಕೆ.ಎಂ. ಅಶ್ರಫ್ ನೇತೃತ್ವದಲ್ಲಿ ಸಾರ್ವಜನಿಕರು ತೀವ್ರ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಟೋಲ್ ಪ್ಲಾಝಾ ವಿರುದ್ಧ ಹೈಕೋರ್ಟ್‌ನಲ್ಲಿಯೂ ದಾವೆ ಹೂಡಲಾಗಿತ್ತು. ಈ ಹೋರಾಟವು ಟೋಲ್ ರದ್ದತಿಗೆ ಮಹತ್ವದ ತಿರುವು ನೀಡಿತು.

ಅಂತಿಮವಾಗಿ, ಹೆದ್ದಾರಿ ಇಲಾಖೆಯು ಹೈಕೋರ್ಟ್‌ಗೆ ಹಾಜರಾಗದೆ, ಕಳೆದ ಫೆಬ್ರವರಿ 4ರಂದು ಟೋಲ್ ರದ್ದುಗೊಳಿಸುವ ಆದೇಶ ಹೊರಡಿಸಿತ್ತು. ನ್ಯಾಯಾಂಗ ಹೋರಾಟ ಮತ್ತು ಸಾರ್ವಜನಿಕ ಬಹಿಷ್ಕಾರದ ಮೂಲಕ ರದ್ದಾದ ದೇಶದ ಮೊದಲ ಟೋಲ್ ಎಂಬ ಹೆಗ್ಗಳಿಕೆ ಆರಿಕ್ಕಾಡಿ ಟೋಲ್‌ಗೆ ಇದೆ. ಟೋಲ್ ರದ್ದಾದ ಬಳಿಕವೂ ಗೇಟ್ ತೆರವುಗೊಳಿಸದೆ ಉಳಿದಿದ್ದರಿಂದ ಕೆಲವು ಅಪಘಾತಗಳು ಸಂಭವಿಸಿದ್ದವು. ಇದೀಗ ತೆರವು ಕಾರ್ಯ ಆರಂಭವಾಗಿರುವುದರಿಂದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!