ನ. 30ರವರೆಗೆ ಸೌದಿ ಅರೇಬಿಯಾಕ್ಕೆ ಹೊರಡುವ ಎಲ್ಲಾ ವಿಮಾನಗಳ ಹಾರಾಟ ರದ್ದು
ಹೊಸದೆಹಲಿ: ಸೌದಿ ಅರೇಬಿಯಾದಲ್ಲಿ ಉದ್ಭವಿಸಿರುವ ಭದ್ರತಾ ಪರಿಸ್ಥಿತಿಯನ್ನು ಪರಿಗಣಿಸಿ, ಮುನ್ನೆಚ್ಚರಿಕೆ ಕ್ರಮವಾಗಿ ನವೆಂಬರ್ 30, 2026ರವರೆಗೆ ಸೌದಿ ಅರೇಬಿಯಾಕ್ಕೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸುವುದಾಗಿ ಪ್ರಮುಖ ವಿಮಾನಯಾನ ಸಂಸ್ಥೆಯಾದ ‘ಇಂಡಿಗೋ’ (IndiGo) ಘೋಷಿಸಿದೆ.
ಬುಧವಾರ ಅಧಿಕೃತ ಪ್ರಯಾಣ ಸಲಹೆಯನ್ನು (Travel Advisory) ಬಿಡುಗಡೆ ಮಾಡಿರುವ ಇಂಡಿಗೋ, ಸೌದಿಯ ನಾಲ್ಕು ಪ್ರಮುಖ ನಗರಗಳಾದ ಜೆಡ್ಡಾ, ಮದೀನಾ, ರಿಯಾದ್ ಹಾಗೂ ದಮ್ಮಾಮ್ ಅನ್ನು ಸಂಪರ್ಕಿಸುವ ಎಲ್ಲಾ ವಿಮಾನ ಸೇವೆಗಳು ಈ ತಿಂಗಳ ಅಂತ್ಯದವರೆಗೆ ಅಮಾನತಿನಲ್ಲಿರಲಿವೆ ಎಂದು ಸ್ಪಷ್ಟಪಡಿಸಿದೆ. ವಿಮಾನಯಾನ ಸಂಸ್ಥೆಯ ಪ್ರಕಟಣೆಯ ಪ್ರಕಾರ, ಈ ಕೆಳಗಿನ ನಾಲ್ಕು ಪ್ರಮುಖ ಸ್ಥಳಗಳಿಗೆ ತೆರಳುವ ಹಾಗೂ ಅಲ್ಲಿಂದ ವಾಪಸ್ಸಾಗುವ ಎಲ್ಲಾ ವಿಮಾನಗಳು ನವೆಂಬರ್ 30ರವರೆಗೆ ರದ್ದಾಗಿರುತ್ತವೆ: ಜೆಡ್ಡಾ (Jeddah), ಮದೀನಾ (Medina),ರಿಯಾದ್ (Riyadh),ದಮ್ಮಾಮ್ (Dammam)
ಸೌದಿ ಅರೇಬಿಯಾದಲ್ಲಿ ಪ್ರಸ್ತುತ ತಲೆದೋರಿರುವ ಭದ್ರತಾ ಸಂಬಂಧಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ತಮ್ಮ ಮೊದಲ ಆದ್ಯತೆ ಎಂದು ಇಂಡಿಗೋ ಪುನರುಚ್ಚರಿಸಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕಾಲಕಾಲಕ್ಕೆ ತಕ್ಕಂತೆ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ವಿಮಾನ ರದ್ದತಿಯಿಂದ ತೊಂದರೆಗೊಳಗಾದ ಗ್ರಾಹಕರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಾಯವನ್ನು ಒದಗಿಸಲು ಬದ್ಧವಾಗಿರುವುದಾಗಿ ಸಂಸ್ಥೆ ಭರವಸೆ ನೀಡಿದೆ. ಟಿಕೆಟ್ ಬುಕಿಂಗ್ ವೇಳೆ ಪ್ರಯಾಣಿಕರು ನೀಡಿರುವ ನೋಂದಾಯಿತ ಇಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳ ಮೂಲಕ ಅವರಿಗೆ ಈ ಮಾಹಿತಿಯನ್ನು ತಲುಪಿಸಲಾಗುತ್ತಿದೆ.




