November 16, 2026

ಅಂತರ್ಜಾತಿ ಪ್ರೇಮಕ್ಕೆ ವಿರೋಧ: ಮಗಳ ಕತ್ತು ಹಿಸುಕಿ ಕೊಂದ ತಂದೆ

0
image_editor_output_image259799203-1794804015682

ವಡೋದರಾ: ಅಂತರ್ಜಾತಿ ಯುವಕನೊಂದಿಗಿನ ಪ್ರೇಮ ಸಂಬಂಧವನ್ನು ಕಡಿದುಕೊಳ್ಳಲು ನಿರಾಕರಿಸಿದ ಕಾರಣಕ್ಕೆ, ತಂದೆಯೊಬ್ಬ ತನ್ನ 21 ವರ್ಷದ ಮಗಳನ್ನು ದುಪಟ್ಟಾದಿಂದ ಕತ್ತು ಹಿಸುಕಿ ಕೊಲೆ ಮಾಡಿರುವ ಮರ್ಯಾದೆಗೇಡು ಹತ್ಯೆ ಪ್ರಕರಣ ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ನವೆಂಬರ್ 9 ರಂದು ನಡೆದಿದೆ.

ಮೆಟ್ಪುರ್ ಗ್ರಾಮದ ನಿವಾಸಿ ಕೌಶಲ್ ಪಟೇಲ್ (50) ತನ್ನ ಮಗಳು ಸಾನಿಯಾಳನ್ನು (21) ಕೊಲೆ ಮಾಡಿದ ಆರೋಪಿ. ಖಂಭತ್ ಪಟ್ಟಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವಡೋದರಾದಲ್ಲಿ ಬಿಕಾಂ ಪದವಿ ಪೂರೈಸಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಸಾನಿಯಾ, ತಮ್ಮದೇ ಗ್ರಾಮದ ಅನ್ಯಜಾತಿಯ ಯುವಕನೊಬ್ಬನನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದಳು.

ಯುವಕ ಬೇರೆ ಜಾತಿಗೆ ಸೇರಿದವನಾಗಿದ್ದಲ್ಲದೆ, ಆತನ ತಿಂಗಳ ಆದಾಯ ₹10,000 ದಿಂದ ₹15,000 ಮಾತ್ರ ಇರುವುದರಿಂದ ತಂದೆ ಕೌಶಲ್ ಪಟೇಲ್ ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪದೇ ಪದೇ ಎಚ್ಚರಿಕೆ ನೀಡಿದರೂ ಸಾನಿಯಾ ಯುವಕನೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿದ್ದಳು.

ಭಾನುವಾರ ಸಂಜೆ ಕುಟುಂಬಸ್ಥರೆಲ್ಲರೂ ಸೇರಿ ದೀಪಾವಳಿ ಹಬ್ಬ ಆಚರಿಸಿ ತಡರಾತ್ರಿ ಮಲಗಿದ್ದರು. ಸೋಮವಾರ ಬೆಳಗಿನ ಜಾವ 3.15ರ ಸುಮಾರಿಗೆ ಮನೆಯವರೆಲ್ಲರೂ ನಿದ್ರಿಸುತ್ತಿದ್ದಾಗ, ಅಡುಗೆಮನೆಯಲ್ಲಿ ತಂದೆ ಮತ್ತು ಮಗಳ ನಡುವೆ ಇದೇ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ.

ಜಗಳದ ಭರದಲ್ಲಿ ಕೌಶಲ್ ಪಟೇಲ್, “ನಿನ್ನ ಕತ್ತು ಹಿಸುಕಿ ಕೊಂದುಬಿಡುತ್ತೇನೆ” ಎಂದು ಬೆದರಿಕೆ ಹಾಕಿದ್ದ. ಆದರೆ ತಂದೆ ತಮಾಷೆ ಮಾಡುತ್ತಿದ್ದಾರೆ ಎಂದು ಸಾನಿಯಾ ನಿರ್ಲಕ್ಷಿಸಿದ್ದಳು.

ಇದರಿಂದ ಕೆರಳಿದ ಕೌಶಲ್, ಆಕೆಯ ದುಪಟ್ಟಾದಿಂದಲೇ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಯ ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಕೌಶಲ್ ಮತ್ತು ಕುಟುಂಬಸ್ಥರು, ಬೆಳಿಗ್ಗೆ 5 ಗಂಟೆ ಸುಮಾರಿಗೆ ಸಾನಿಯಾಳ ಮೃತದೇಹವನ್ನು ಖಂಭತ್ ಜನರಲ್ ಆಸ್ಪತ್ರೆಗೆ ಕೊಂಡೊಯ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವೈದ್ಯರ ಮುಂದೆ ಕಥೆ ಕಟ್ಟಿದ್ದರು.

ಆದರೆ ಮೃತದೇಹವನ್ನು ಪರಿಶೀಲಿಸಿದ ವೈದ್ಯರಿಗೆ ಸಾವಿನ ಬಗ್ಗೆ ಅನುಮಾನ ಮೂಡಿದ್ದು, ವಿಧಿವಿಜ್ಞಾನ ಮರಣೋತ್ತರ ಪರೀಕ್ಷೆಗಾಗಿ ಕರಮ್ಸದ್‌ನ ಶ್ರೀ ಕೃಷ್ಣ ಆಸ್ಪತ್ರೆಗೆ ರವಾನಿಸಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ಕುತ್ತಿಗೆಯನ್ನು ಬಲವಾಗಿ ಹಿಸುಕಿ  ಕೊಲೆ ಮಾಡಿರುವುದು ದೃಢಪಟ್ಟಿತು.

ಪೊಲೀಸರು ಕುಟುಂಬಸ್ಥರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಕೌಶಲ್ ತಪ್ಪೊಪ್ಪಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ್ದ ದುಪಟ್ಟಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ಖಂಭತ್ ಟೌನ್ ಠಾಣೆಯ ಇನ್ಸ್‌ಪೆಕ್ಟರ್ ಪಿ.ಜೆ. ಬಂಟ್ವಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!