ಕುರ್ ಆನ್ ಸಾಲುಗಳಿದ್ದ ಪೆಂಡೆಂಟ್ ಧರಿಸಿದ ಕರೀನಾ ಕಪೂರ್ ಖಾನ್ಗೆ ಲೀಗಲ್ ನೋಟಿಸ್
ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಧರಿಸಿದ್ದ ಉಡುಗೆ ಹಾಗೂ ಐತಿಹಾಸಿಕ ಆಭರಣವೊಂದು ವಿವಾದಕ್ಕೀಡಾಗಿದ್ದು, ನಟಿಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ.
ಶತಮಾನಗಳಷ್ಟು ಹಳೆಯದಾದ ರಾಜಮನೆತನದ ಆಸ್ತಿಯಾಗಿದ್ದು, ಅದರ ಮೇಲೆ ಕುರಾನ್ನ ಪದ್ಯವನ್ನು ಕೆತ್ತಲಾಗಿರುವ ಪೆಂಡೆಂಟ್ ಧರಿಸಿದ್ದಕ್ಕೆ ಭೋಪಾಲ್ನ ಕಾಂಗ್ರೆಸ್ ನಾಯಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವೆಂಬರ್ 11ರಂದು ಭೋಪಾಲ್ ಕಾಂಗ್ರೆಸ್ ನಾಯಕ ಅಬ್ಬಾಸ್ ಹಫೀಜ್ ಅವರು ತಮ್ಮ ವಕೀಲರ ಮೂಲಕ ನಟಿಗೆ ಕಾನೂನು ನೋಟಿಸ್ ಕಳುಹಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ವಿವಾದಿತ ಫೋಟೋಗಳನ್ನು ತಕ್ಷಣವೇ ಅಳಿಸಿಹಾಕಬೇಕು ಹಾಗೂ ಬೇಷರತ್ತಾಗಿ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಕರೀನಾ ಅವರ ದೀಪಾವಳಿ ಉಡುಗೆಯ ಚಿತ್ರಗಳನ್ನು ಸ್ಟೈಲಿಸ್ಟ್ ರಿಯಾ ಕಪೂರ್ ಇತ್ತೀಚೆಗೆ ಅನಾವರಣಗೊಳಿಸಿದ್ದರು. ಪುನೀತ್ ಬಲನಾ ವಿನ್ಯಾಸಗೊಳಿಸಿದ ಶುದ್ಧ ಬೆಳ್ಳಿಯ ಕಫ್ತಾನ್ ಧರಿಸಿದ್ದ ಕರೀನಾ, ಅದಕ್ಕೆ ತಕ್ಕಂತೆ ರಿಯಾ ವಿನ್ಯಾಸಗೊಳಿಸಿದ್ದ ಪೇಟವನ್ನು ಧರಿಸಿದ್ದರು.
ಭೋಪಾಲ್ ನವಾಬರಿಗೆ ಸೇರಿದ 200 ವರ್ಷ ಹಳೆಯ ಕಲ್ಗಿ (ಪೇಟ ಆಭರಣ) ಹಾಗೂ ಭೋಪಾಲ್ ಬೇಗಂಗೆ ಸೇರಿದ ಆಕರ್ಷಕ 30 ಕ್ಯಾರೆಟ್ ಪಚ್ಚೆ ಪೆಂಡೆಂಟ್ ಅನ್ನು ಈ ಲುಕ್ಗೆ ಬಳಸಿಕೊಳ್ಳಲಾಗಿತ್ತು. ಇನ್ಸ್ಟಾಗ್ರಾಮ್ ಶೀರ್ಷಿಕೆಯಲ್ಲಿ ಈ ಪಚ್ಚೆಯ ಮೇಲೆ ಕುರಾನ್ನ ಸಾಲುಗಳನ್ನು ಕೆತ್ತಲಾಗಿತ್ತು. ಸೈಫ್ ಅವರ ತಂದೆಯ ಅಜ್ಜಿ ಸಾಜಿದಾ ಸುಲ್ತಾನ್ ಅವರು ಭೋಪಾಲ್ನ ಕೊನೆಯ ಆಡಳಿತ ನವಾಬ್ ಹಮೀದುಲ್ಲಾ ಖಾನ್ ಅವರ ಮಗಳಾಗಿದ್ದಾರೆ.
ವಕೀಲ ಮೊಹಮ್ಮದ್ ಜಾಫರ್ ಮೂಲಕ ಸಲ್ಲಿಸಲಾದ ನೋಟಿಸ್ನಲ್ಲಿ, ಪವಿತ್ರ ಕುರಾನ್ ಪದ್ಯವನ್ನು ಕೇವಲ ಫ್ಯಾಷನ್ ಅಥವಾ ಅಲಂಕಾರಿಕ ಪರಿಕರವಾಗಿ ಪರಿಗಣಿಸುವುದರಿಂದ ಅದರ ಧಾರ್ಮಿಕ ಪಾವಿತ್ರ್ಯತೆಗೆ ಚ್ಯುತಿ ಉಂಟಾಗುತ್ತದೆ ಎಂದು ವಾದಿಸಲಾಗಿದೆ. ಈ ಕುರಿತು ಮಾತನಾಡಿರುವ ಅಬ್ಬಾಸ್ ಹಫೀಜ್, “ಈ ಪೆಂಡೆಂಟ್ ಅನ್ನು ಮೂಲತಃ ಭೋಪಾಲ್ನ ಹಿಂದಿನ ಬೇಗಂಗಳು ಕೇವಲ ಸ್ಟೈಲ್ ಸ್ಟೇಟ್ಮೆಂಟ್ ಆಗಿ ಅಲ್ಲ, ಬದಲಾಗಿ ಗಾಢವಾದ ನಂಬಿಕೆಯ ಅಭಿವ್ಯಕ್ತಿಯಾಗಿ ನಿಯೋಜಿಸಿದ್ದರು” ಎಂದಿದ್ದಾರೆ.
ಇಸ್ಲಾಮಿಕ್ ಸಂಪ್ರದಾಯಗಳ ಪ್ರಕಾರ ಪವಿತ್ರ ವಚನಗಳನ್ನು ಬಳಸುವಾಗ ಕಟ್ಟುನಿಟ್ಟಾದ ಧಾರ್ಮಿಕ ನಿಯಮಗಳು ಹಾಗೂ ಗೌರವವನ್ನು ಪಾಲಿಸಬೇಕು ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಪರವಾಗಿ ಅಲ್ಲ, ಮುಸ್ಲಿಂ ಸಮುದಾಯದ ಕಾಳಜಿಪರ ವ್ಯಕ್ತಿಯಾಗಿ ತಾನು ಈ ನೋಟಿಸ್ ನೀಡಿರುವುದಾಗಿ ಹಫೀಜ್ ಸ್ಪಷ್ಟಪಡಿಸಿದ್ದಾರೆ. ಕರೀನಾ ಅವರ ಉಡುಗೆ ತೊಡುಗೆಯ ಬಗ್ಗೆ ತಮಗೆ ಯಾವುದೇ ವಿರೋಧವಿಲ್ಲ, ಆದರೆ ಪವಿತ್ರ ಶ್ಲೋಕವನ್ನು ಪ್ರದರ್ಶಿಸಿದ ರೀತಿಯ ಬಗ್ಗೆ ಮಾತ್ರ ಆಕ್ಷೇಪವಿದೆ ಎಂದು ಅವರು ತಿಳಿಸಿದ್ದಾರೆ. ಫೋಟೋಗಳನ್ನು ತೆಗೆದುಹಾಕಿ ಕ್ಷಮೆಯಾಚಿಸದಿದ್ದರೆ, ಈ ವಿಷಯವನ್ನು ಪೊಲೀಸರು ಅಥವಾ ನ್ಯಾಯಾಲಯದ ಮುಂದೆ ಕೊಂಡೊಯ್ಯುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.




