November 13, 2026

ಯುಎಇಯಲ್ಲಿ ಭೀಕರ ರಸ್ತೆ ಅಪಘಾತ: ಕೇರಳದ ಒಂದೇ ಕುಟುಂಬದ ಮೂವರು ಸಾವು

0
image_editor_output_image-1016799677-1794539782760

ಮಲಪ್ಪುರಂ (ಕೇರಳ): ಯುನೈಟೆಡ್ ಅರಬ್ ಎಮಿರೇಟ್ಸ್‌ನ ಫುಜೈರಾದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ 21 ವರ್ಷದ ಅವಳಿ ಸಹೋದರ-ಸಹೋದರಿ ಹಾಗೂ ಅದೇ ಕುಟುಂಬದ ಮೂರು ವರ್ಷದ ಮಗು ಸೇರಿ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತರನ್ನು ಮುಹಮ್ಮದ್ ಅಸ್ಮಿಲ್ (21), ಅವರ ಅವಳಿ ಸಹೋದರಿ ಮಿಸ್ನಾ ಜುಬಿನ್ (21) ಹಾಗೂ ಇವರ ಅಕ್ಕ ಫರ್ಜಾನಾ ಅವರ ಪುತ್ರ ಮುಹಮ್ಮದ್ ಫೈಜ್ (3) ಎಂದು ಗುರುತಿಸಲಾಗಿದೆ.

ಮೃತ ಅಸ್ಮಿಲ್ ಮತ್ತು ಮಿಸ್ನಾ, ಎ.ಆರ್. ನಗರದ ಸ್ಥಳೀಯ ಮುಸ್ಲಿಂ ಲೀಗ್ ನಾಯಕ ಟಿ.ಕೆ. ಮೊಯಿತೀನ್ ಕುಟ್ಟಿ ಮಾಸ್ಟರ್ ಅವರ ಪುತ್ರ ಸಿದ್ದಿಕ್ ಅವರ ಮಕ್ಕಳಾಗಿದ್ದಾರೆ. ಗುರುವಾರ ಮುಂಜಾನೆ 2 ಗಂಟೆ ಸುಮಾರಿಗೆ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ವಾಹನವು ಫುಜೈರಾದಲ್ಲಿ ಮುಂದೆ ಚಲಿಸುತ್ತಿದ್ದ ಟ್ರೇಲರ್‌ನ ಹಿಂಭಾಗಕ್ಕೆ ರಭಸವಾಗಿ ಢಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತದಲ್ಲಿ ಒಟ್ಟು ಆರು ವಾಹನಗಳು ಜಖಂಗೊಂಡಿವೆ ಎಂದು ವರದಿಯಾಗಿದೆ. ಸಿದ್ದಿಕ್, ಪತ್ನಿ ಆರಿಫಾ, ಪುತ್ರಿ ಫರ್ಜಾನಾ ಹಾಗೂ ಮೊಮ್ಮಗ ಫೈಜ್ ಕಳೆದ ಮಂಗಳವಾರವಷ್ಟೇ ಮಲಪ್ಪುರಂನಿಂದ ಯುಎಇಗೆ ಮರಳಿದ್ದರು. ಫರ್ಜಾನಾ ವೈದ್ಯಕೀಯ ತಪಾಸಣೆಗಾಗಿ ಅಲ್ಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.

ಕೇರಳದಲ್ಲಿ 10ನೇ ತರಗತಿ ಪೂರೈಸಿದ್ದ ಅಸ್ಮಿಲ್ ಮತ್ತು ಮಿಸ್ನಾ ಬಳಿಕ ಯುಎಇಗೆ ತೆರಳಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಕೆಲವು ವಾರಗಳ ಹಿಂದಷ್ಟೇ ಊರಿಗೆ ಬಂದು ಹೋಗಿದ್ದ ಈ ಅವಳಿಗಳು, ಪದವಿ ಶಿಕ್ಷಣ ಮುಗಿದ ನಂತರ ಶಾಶ್ವತವಾಗಿ ಕೇರಳಕ್ಕೆ ಮರಳಿ ನೆಲೆಸುವ ಯೋಜನೆ ಹಾಕಿಕೊಂಡಿದ್ದರು. ಅವಳಿ ಮಕ್ಕಳ ನಡುವೆ ಅತ್ಯಂತ ಗಾಢವಾದ ಬಾಂಧವ್ಯವಿತ್ತು; ಯಾವಾಗಲೂ ಒಟ್ಟಿಗೆ ಇರುತ್ತಿದ್ದರು. ದುಬೈನಲ್ಲಿ ಓದುತ್ತಲೇ ತಂದೆಯ ವ್ಯವಹಾರಕ್ಕೂ ನೆರವಾಗುತ್ತಿದ್ದರು. ಇಬ್ಬರೂ ಒಟ್ಟಿಗೆ ಮೃತಪಟ್ಟಿರುವುದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ” ಎಂದು ಸಂಬಂಧಿ ಮುಮ್ತಾಜ್ ಕಣ್ಣೀರಿಟ್ಟಿದ್ದಾರೆ.

ಸಿದ್ದಿಕ್ ಅವರು ಫುಜೈರಾದಲ್ಲಿ ಕೆಫೆಟೇರಿಯಾ ಉದ್ಯಮ ನಡೆಸುತ್ತಿದ್ದು, ಅಳಿಯ (ಫರ್ಜಾನಾ ಪತಿ) ಕೂಡ ವ್ಯವಹಾರದಲ್ಲಿ ಕೈಜೋಡಿಸಿದ್ದರು. ವೀಸಾ ನವೀಕರಿಸಿ ಇನ್ನೂ ಕೆಲವು ವರ್ಷ ಯುಎಇಯಲ್ಲೇ ನೆಲೆಸಲು ಫರ್ಜಾನಾ ನಿರ್ಧರಿಸಿದ್ದರು. ಆದರೆ, ವಿಧಿಯಾಟಕ್ಕೆ ಒಂದೇ ಕುಟುಂಬದ ಮೂವರು ಬಲಿಯಾಗಿದ್ದಾರೆ ಎಂದು ಸಿದ್ದಿಕ್ ಅವರ ಸಹೋದರ ಕುಂಜಲಾಸನ್ ದುಃಖ ತೋಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!