November 11, 2026

ಕಣ್ಣೂರು: ತಾಯಿಯನ್ನು  ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕ

0
image_editor_output_image-658197493-1794365575973

ಕಣ್ಣೂರು: ಖಿನ್ನತೆಯಿಂದ ಬಳಲುತ್ತಿದ್ದನೆನ್ನಲಾದ 22 ವರ್ಷದ ಯುವಕನೊಬ್ಬ ತನ್ನ ತಾಯಿಯ ಕುತ್ತಿಗೆ ಕಡಿದು ಕೊಲೆ ಮಾಡಿ, ಬಳಿಕ ತಾನೂ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಂಗಳವಾರ ಮಟ್ಟನ್ನೂರಿನಲ್ಲಿ ನಡೆದಿದೆ.

ನಿವೃತ್ತ ಶಾಲಾ ಶಿಕ್ಷಕಿ ಜ್ಯೋತಿ (56) ಹಾಗೂ ಅವರ ಪುತ್ರ ನವೀನ್ ಕೃಷ್ಣನ್ (22) ಮೃತಪಟ್ಟವರು. ಇವರು ಮಟ್ಟನ್ನೂರ್ ಪಟ್ಟಣದ ಇಂದಿರಾ ನಗರದ ನಿವಾಸಿಗಳಾಗಿದ್ದಾರೆ.

ಮಂಗಳವಾರ ಬೆಳಿಗ್ಗೆ 8.30ರಿಂದ 10.45ರ ನಡುವೆ ಈ ಘಟನೆ ನಡೆದಿದೆ. ಕೆಎಸ್‍ಇಬಿಯ ನಿವೃತ್ತ ಸೂಪರಿಂಟೆಂಡೆಂಟ್ ಆಗಿರುವ ನವೀನ್ ಅವರ ತಂದೆ ಜಯಕೃಷ್ಣನ್ ಕೆ.ಟಿ. ಪಟ್ಟಣಕ್ಕೆ ತೆರಳಿದ್ದರು. ಅವರು ಮನೆಗೆ ಹಿಂತಿರುಗಿದಾಗ ಮನೆಯ ಮೇಲಿನ ಮಹಡಿಯ ಸೆಂಟ್ರಲ್ ಹಾಲ್‌ನಲ್ಲಿ ಪತ್ನಿ ಮತ್ತು ಮಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಇಬ್ಬರನ್ನೂ ತಲಶ್ಶೇರಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಮಟ್ಟನ್ನೂರು ವೃತ್ತ ನಿರೀಕ್ಷಕ ಸಿಜು ಅವರ ಪ್ರಕಾರ, ನವೀನ್ ತನ್ನ ತಾಯಿಯ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ ನಂತರ, ತನ್ನ ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನವೀನ್ ಬಿಕಾಂ ಮುಗಿಸಿ ಸಿಎ (ಚಾರ್ಟರ್ಡ್ ಅಕೌಂಟೆನ್ಸಿ) ಕೋರ್ಸ್‌ಗೆ ಸೇರಿಕೊಂಡಿದ್ದ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಆರ್ಥಿಕ ಸಮಸ್ಯೆಗಳಾಗಲಿ ಅಥವಾ ಕೌಟುಂಬಿಕ ವಿವಾದಗಳಾಗಲಿ ಕಂಡುಬಂದಿಲ್ಲ. ಆದರೆ ನವೀನ್ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಸದರಿ ಘಟನೆ ಕುರಿತು ಮಟ್ಟನ್ನೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!