November 10, 2026

ಸ್ಟಿಂಗ್ ಆಪರೇಷನ್ ಪ್ರಕರಣ: ಸೈಬರ್ ಕ್ರೈಂ ಪೊಲೀಸರ ಮುಂದೆ ಹಾಜರಾದ ಕೃಪಾ ಆಳ್ವಾ

28ad38fc-c198-4363-9a3e-8e8a1b9f1aef

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ವಿಚಾರ ಸಂಬಂಧ ಮಕ್ಕಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವಾ ಅವರು ಸೋಮವಾರ ಸೈಬರ್ ಕ್ರೈಂ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

ಕಳೆದ ವಾರವಷ್ಟೇ ಕೃಪಾ ಆಳ್ವಾಗೆ ನ್ಯಾಯಾಲಯವು ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿತ್ತು. ತನಿಖಾಧಿಕಾರಿಗಳು ವಿಚಾರಣೆ ಕರೆದಾಗ ಬರಬೇಕು. ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಷರತ್ತು ವಿಧಿಸಿ ಜಾಮೀನು ನೀಡಲಾಗಿತ್ತು.

ಅದರಂತೆ, ವಿಚಾರಣೆಗೆ ಹಾಜರಾಗುವಂತೆ ನೀಡಿದ ನೋಟಿಸ್ ಮೇರೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೈಬರ್ ಕ್ರೈಂ ಪೊಲೀಸರ ಮುಂದೆ ಕೃಪಾ ಅವರು ಹಾಜರಾಗಿದ್ದರು. ಸುಮಾರು ಎರಡೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ನವೆಂಬರ್​ 11ರಂದು ಮತ್ತೆ ವಿಚಾರಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ. ಇದಕ್ಕೂ ಮುನ್ನ ಕೃಪಾ ಆಳ್ವಾ ಪರ ವಕೀಲೆ ನಿಖಿತಾ ಮಾಧ್ಯಮದವರೊಂದಿಗೆ ಮಾತನಾಡಿ, ಕೃಪಾ ಆಳ್ವಾ ಅವರು ಈಗಾಗಲೇ ಎರಡು ಬಂದು ವಿಚಾರಣೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಮತ್ತೊಮ್ಮೆ ಬರುವುದಕ್ಕೆ ಸೂಚಿಸಿದ್ದರು. ಇದರಂತೆ ಇಂದು ವಿಚಾರಣೆಗೆ ಬಂದಿದ್ದಾರೆ. ಅಧಿಕೃತವಾಗಿ ಇಂದು ಹೇಳಿಕೆ ಕೊಡಲು ಬಂದಿದ್ದಾರೆ ಎಂದರು.

ವಿದೇಶಕ್ಕೆ ಹೋಗಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ವಕೀಲೆ, ಕೃಪಾ ಆಳ್ವಾ ಅವರು ಮಗಳೊಂದಿಗೆ ವಿದೇಶಕ್ಕೆ ಹೋಗಿದ್ದರು. ಪೂರ್ವನಿಯೋಜಿತ ಪ್ರವಾಸವಾಗಿತ್ತು, ಹೊರತು ಬೇರೆ ಉದ್ದೇಶವಿಲ್ಲ ಎಂದು ತಿಳಿಸಿದರು.

error: Content is protected !!