November 16, 2026

ಹಾರೆಯಿಂದ ಕೊಚ್ಚಿ ಮಗನನ್ನೇ ಬರ್ಬರವಾಗಿ ಕೊಲೆಗೈದ ತಂದೆ

0
image_editor_output_image-396824228-1794801811558

ತುಮಕೂರು: ಮದ್ಯವ್ಯಸನಿ ತಂದೆಯೊಬ್ಬ ಪತ್ನಿಯೊಂದಿಗಿನ ಜಗಳ ಬಿಡಿಸಲು ಮುಂದಾದ 16 ವರ್ಷದ ಮಗನನ್ನೇ ಹಾರೆಯಿಂದ ಮನಬಂದಂತೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ವ್ಯಾಪ್ತಿಯ ಚೌಡನಾಯಕನಪಾಳ್ಯ ಗ್ರಾಮದಲ್ಲಿ  ಬೆಳಿಗ್ಗೆ ನಡೆದಿದೆ.

ಚೌಡನಾಯಕನಪಾಳ್ಯ ನಿವಾಸಿ ಸುನೀಲ್ (16) ಮೃತಪಟ್ಟ ದುರ್ದೈವಿ ಬಾಲಕ. ಕೃತ್ಯ ಎಸಗಿದ ಆರೋಪಿ ತಂದೆ ನಂಜೇಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನಂಜೇಗೌಡ ಮದ್ಯವ್ಯಸನಿಯಾಗಿದ್ದು, ಮನೆಯಲ್ಲಿ ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ. ಈ ಹಿಂದೆಯೂ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆತ ಜೈಲು ಸೇರಿದ್ದ ಎಂದು ತಿಳಿದುಬಂದಿದೆ.

ಭಾನುವಾರ ಬೆಳಿಗ್ಗೆ ನಂಜೇಗೌಡ ಮತ್ತೆ ಪತ್ನಿಯೊಂದಿಗೆ ಜಗಳ ತೆಗೆದು ಹಲ್ಲೆ ನಡೆಸುತ್ತಿದ್ದ. ಇದನ್ನು ಗಮನಿಸಿದ ಮಗ ಸುನೀಲ್ ತಾಯಿಯ ರಕ್ಷಣೆಗೆ ಧಾವಿಸಿ, ಜಗಳ ಬಿಡಿಸಲು ಮುಂದಾಗಿದ್ದಾನೆ. ಇದರಿಂದ ತೀವ್ರ ಕುಪಿತಗೊಂಡ ನಂಜೇಗೌಡ, ಪತ್ನಿಯನ್ನು ಮನೆಯಿಂದ ಹೊರಗೆ ತಳ್ಳಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ.

ಬಳಿಕ ಮನೆಯಲ್ಲಿದ್ದ ಕಬ್ಬಿಣದ ಹಾರೆಯಿಂದ ಮಗ ಸುನೀಲ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕುಣಿಗಲ್ ಸಿಪಿಐ ಮಾಧ್ಯನಾಯಕ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ, ಆರೋಪಿ ನಂಜೇಗೌಡನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!