ಮಂಗಳೂರು: ಗೋರಿಗುಡ್ಡ ಬಳಿ ರಸ್ತೆ ಅಪಘಾತ: ನರ್ಸಿಂಗ್ ವಿದ್ಯಾರ್ಥಿನಿ ಮೃತ್ಯು
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಪಂಪ್‌ವೆಲ್ ಸಮೀಪದ ಉಜ್ಜೋಡಿ ಗೋರಿಗುಡ್ಡ ಬಳಿ ಬೈಕ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿ ಜ್ಯೋತಿ (19) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನಗರದ ಖಾಸಗಿ ಕಾಲೇಜೊಂದರಲ್ಲಿ ಜಿಎನ್‌ಎಂ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಜ್ಯೋತಿ, ಕುಟುಂಬಕ್ಕೆ ಆಧಾರವಾಗಬೇಕೆಂಬ ಕನಸು ಕಂಡಿದ್ದರು. ಆದರೆ, ವಿಧಿಯಾಟಕ್ಕೆ ಆಕೆಯ ಕನಸು ನನಸಾಗುವ ಮೊದಲೇ ಕಮರಿಹೋಗಿದೆ.
ಕಳೆದ ನವೆಂಬರ್ 14ರಂದು ಬೆಳಿಗ್ಗೆ ಜ್ಯೋತಿ ಮತ್ತು ಆಕೆಯ ಸಂಬಂಧಿ ನಂದಿನಿ (19) ಉಜ್ಜೋಡಿ ಗೋರಿಗುಡ್ಡ ಬಳಿ ರಾಷ್ಟ್ರೀಯ ಹೆದ್ದಾರಿಯ ವಿಭಜಕ ದಾಟಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ತೊಕ್ಕೊಟ್ಟು ಕಡೆಯಿಂದ ನಂತೂರು ಕಡೆಗೆ ವೇಗವಾಗಿ ಬರುತ್ತಿದ್ದ ಬೈಕ್ ಇಬ್ಬರಿಗೂ ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ಜ್ಯೋತಿ ಹಾಗೂ ನಂದಿನಿ ಗಂಭೀರವಾಗಿ ಗಾಯಗೊಂಡಿದ್ದರೆ, ಬೈಕ್ ಸವಾರರಿಗೂ ಗಾಯಗಳಾಗಿದ್ದವು. ಆಸ್ಪತ್ರೆಗೆ ದಾಖಲಾಗಿ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದ ಜ್ಯೋತಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಚಿಕ್ಕಮಗಳೂರಿನ ಶಿಳ್ಳೆಕ್ಯಾತ ಅಲೆಮಾರಿ ಸಮುದಾಯಕ್ಕೆ ಸೇರಿದ ಜ್ಯೋತಿ ಅವರ ಕುಟುಂಬ ಹಲವು ವರ್ಷಗಳಿಂದ ಮಂಗಳೂರಿನ ಕಣ್ಣೂರಿನಲ್ಲಿ ನೆಲೆಸಿದೆ. ನೇತ್ರಾವತಿ ನದಿಯಲ್ಲಿ ತೆಪ್ಪದ ಮೂಲಕ ಮೀನು ಹಿಡಿಯುವ ವೃತ್ತಿಯಿಂದ ಜೀವನ ಸಾಗಿಸುತ್ತಿರುವ ಬಡ ಕುಟುಂಬದಲ್ಲಿ ಜ್ಯೋತಿ ಹಿರಿಯ ಪುತ್ರಿಯಾಗಿದ್ದರು. ‘‘ಕಷ್ಟದಲ್ಲೇ ಬೆಳೆದು ಬಂದಿದ್ದ ಜ್ಯೋತಿ, ನರ್ಸ್ ಆಗಿ ಕುಟುಂಬಕ್ಕೆ ಆಸರೆಯಾಗಬೇಕೆಂಬ ದೊಡ್ಡ ಕನಸು ಕಂಡಿದ್ದಳು. ಆದರೆ, ಆಕೆಯ ಕನಸು ನನಸಾಗಲೇ ಇಲ್ಲ’’ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಮೃತರು ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.




