ತಲೆಮರೆಸಿಕೊಂಡಿದ್ದ ಒಂಬತ್ತು ಮಂದಿ ರೌಡಿಶೀಟರ್ಗಳ ಬಂಧನ
ಬೆಂಗಳೂರು : ನಗರದ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರೌಡಿ ನಿಗ್ರಹ ದಳದ ಪೊಲೀಸರು ಏಕಕಾಲದಲ್ಲಿ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ, ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಒಂಬತ್ತು ಮಂದಿ ರೌಡಿಶೀಟರ್ಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಪನ್ನೀರ್ ಸೇಲ್ವಂ ಅಲಿಯಾಸ್ ತಮಿಳು ಪ್ರಭು, ಶಶಿಕುಮಾರ್ ಅಲಿಯಾಸ್ ಶಶಿ, ನರಸಿಂಹಮೂರ್ತಿ ಅಲಿಯಾಸ್ ಕೊಸೆ, ಸಾಧಿಕ್ ಪಾಷಾ ಅಲಿಯಾಸ್ ಬಿರಿಯಾನಿ, ಅವೆಜ್ ಅಲಿಯಾಸ್ ಮುಹಮ್ಮದ್ ಅಲಿ, ಮಣಿರಾಜ್ ಅಲಿಯಾಸ್ ಮಣಿ, ರಾಜು ಅಲಿಯಾಸ್ ಕರಿಯ ರಾಜು, ಆಯುಬ್ ಖಾನ್ ಹಾಗೂ ಸತೀಶ್ ಕುಮಾರ್ ಎಂದು ಗುರುತಿಸಲಾಗಿದೆ.
ಪೀಣ್ಯ ಪೊಲೀಸ್ ಠಾಣೆಯ ರೌಡಿಶೀಟರ್ ಪನ್ನೀರ್ ಸೇಲ್ವಂ ವಿರುದ್ಧ ಪೀಣ್ಯ, ಮಲ್ಲೇಶ್ವರಂ, ಮಹಾಲಕ್ಷ್ಮೀ ಲೇಔಟ್, ಚಾಮರಾಜಪೇಟೆ, ಜೆ.ಜೆ. ನಗರ ಹಾಗೂ ವಿಜಯನಗರ ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ಕೊಲೆ, ಕೊಲೆಯತ್ನ, ದರೋಡೆ ಮತ್ತು ರಾಬರಿ ಸೇರಿದಂತೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಇದೇ ಠಾಣೆಯ ಮತ್ತೊಬ್ಬ ರೌಡಿಶೀಟರ್ ಶಶಿಕುಮಾರ್ ಕೊಲೆಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ಗಿರಿನಗರ ಪೊಲೀಸ್ ಠಾಣೆಯ ರೌಡಿಶೀಟರ್ ನರಸಿಂಹಮೂರ್ತಿ ವಿರುದ್ಧ ನಾಲ್ಕು ಪ್ರಕರಣಗಳಿದ್ದು, ಸುಮಾರು ಒಂದೂವರೆ ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು.
ಸಿದ್ದಾಪುರ ಪೊಲೀಸ್ ಠಾಣೆಯ ರೌಡಿಶೀಟರ್ ಸಾಧಿಕ್ ಪಾಷಾ ವಿರುದ್ಧ ಸಿದ್ದಾಪುರ ಮತ್ತು ತಿಲಕ್ ನಗರ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ಹಲ್ಲೆ, ಕಳ್ಳತನ ಸೇರಿದಂತೆ ಒಟ್ಟು ಒಂಬತ್ತು ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಆತನ ವಿರುದ್ಧವೂ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು.
ಜೆ.ಜೆ. ನಗರದ ಮುಹಮ್ಮದ್ ಅಲಿ ವಿರುದ್ಧ ಕೊಲೆಯತ್ನ, ದರೋಡೆ ಹಾಗೂ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಗಳು ಸೇರಿದಂತೆ ಒಟ್ಟು ಒಂಬತ್ತು ಪ್ರಕರಣಗಳಿವೆ. ಮಣಿರಾಜ್ ವಿರುದ್ಧ ಜೆ.ಜೆ. ನಗರ ಮತ್ತು ಮಾಗಡಿ ರಸ್ತೆ ಪೊಲೀಸ್ ಠಾಣೆಗಳಲ್ಲಿ ಒಂದು ಕೊಲೆ ಪ್ರಕರಣ ಸೇರಿದಂತೆ ಮೂರು ಪ್ರಕರಣಗಳು ದಾಖಲಾಗಿವೆ.
ರಾಜಗೋಪಾಲನಗರದ ಆಯುಬ್ ಖಾನ್ ವಿರುದ್ಧ ಕೊಲೆಯತ್ನ, ದರೋಡೆ ಹಾಗೂ ಡಕಾಯಿತಿ ಸೇರಿದಂತೆ ಒಂಬತ್ತು ಪ್ರಕರಣಗಳಿವೆ. ಇದೇ ಪ್ರದೇಶದ 28 ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ರಾಜು ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.
ಕೋಣನಕುಂಟೆ ಪೊಲೀಸ್ ಠಾಣೆಯ ರೌಡಿಶೀಟರ್ ಸತೀಶ್ ಕುಮಾರ್ ವಿರುದ್ಧ ಒಟ್ಟು 11 ಪ್ರಕರಣಗಳಿವೆ. ಬೆಂಗಳೂರಿನ ಏಳು ಪೊಲೀಸ್ ಠಾಣೆಗಳು ಹಾಗೂ ಹಾಸನ ಜಿಲ್ಲೆಯ ಎರಡು ಪ್ರಕರಣಗಳು ಸೇರಿದಂತೆ ಒಂಬತ್ತು ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹಲ್ಲೆ, ಲೈಂಗಿಕ ದೌರ್ಜನ್ಯ ಮತ್ತು ವಂಚನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಆತನನ್ನು ಬಂಧಿಸಲಾಗಿದೆ ಎಂದು ರೌಡಿ ನಿಗ್ರಹ ದಳದ ಪೊಲೀಸರು ತಿಳಿಸಿದ್ದಾರೆ.




