October 9, 2026

ಮಂಗಳೂರು: ಆಟೋದಲ್ಲಿ ಬಿಟ್ಟು ಹೋಗಿದ್ದ 48 ಗ್ರಾಂ ತೂಕದ ಚಿನ್ನದ ಸರ ವಾರಸುದಾರರಿಗೆ ಮರಳಿಸಿದ ಚಾಲಕ

0
image_editor_output_image284267704-1791483040830

ಮಂಗಳೂರು: ಆಟೋ ರಿಕ್ಷಾದಲ್ಲಿ ಪ್ರಯಾಣಿಕರು ಆಕಸ್ಮಿಕವಾಗಿ ಮರೆತು ಬಿಟ್ಟುಹೋಗಿದ್ದ ಬರೋಬ್ಬರಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಇದ್ದ ಬ್ಯಾಗನ್ನು ಸುರಕ್ಷಿತವಾಗಿ ವಾರಸುದಾರರಿಗೆ ವಾಪಸ್ ನೀಡುವ ಮೂಲಕ ಆಟೋ ಚಾಲಕ ಬಸವರಾಜ ಅವರು ಮಾನವೀಯತೆ ಹಾಗೂ ಪ್ರಾಮಾಣಿಕತೆ ಮೆರೆದಿದ್ದಾರೆ. ಚಾಲಕನ ಈ ಮಾದರಿ ಕಾರ್ಯಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ಸಾರ್ವಜನಿಕರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಫ್ಜಿಲಾ ಎಂಬ ಮಹಿಳೆಯು ಮಂಗಳೂರಿನ ಸುಲ್ತಾನ್ ಗೋಲ್ಡ್ ಮಳಿಗೆಯಲ್ಲಿ ಸುಮಾರು 48 ಗ್ರಾಂ ತೂಕದ ನೂತನ ಚಿನ್ನದ ನೆಕ್ಲೇಸ್ ಸರವನ್ನು ಖರೀದಿಸಿದ್ದರು. ಬಳಿಕ ಮನೆಗೆ ತೆರಳಲು ಬಸವರಾಜ ಅವರ ಆಟೋ ರಿಕ್ಷಾ ಏರಿದ್ದರು. ಮನೆ ತಲುಪಿ ಆಟೋದಿಂದ ಇಳಿಯುವಾಗ, ಲಕ್ಷಾಂತರ ರೂಪಾಯಿ ಮೌಲ್ಯದ ಹೊಸ ಆಭರಣವಿದ್ದ ಬ್ಯಾಗನ್ನು ಆಟೋದಲ್ಲಿಯೇ ಮರೆತು ಮನೆಗೆ ತೆರಳಿದ್ದರು.

ಪ್ರಯಾಣಿಕರು ಇಳಿದು ಹೋದ ಕೆಲ ಹೊತ್ತಿನ ಬಳಿಕ ಆಟೋದ ಹಿಂಬದಿ ಸೀಟಿನಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ ಚಾಲಕ ಬಸವರಾಜ, ಅದನ್ನು ಪರಿಶೀಲಿಸಿದಾಗ ಅದರಲ್ಲಿ ಬೆಲೆಬಾಳುವ ಚಿನ್ನದ ಆಭರಣ ಇರುವುದು ಕಂಡುಬಂದಿದೆ. ಯಾವುದೇ ಆಸೆ-ಆಮಿಷಕ್ಕೆ ಒಳಗಾಗದ ಬಸವರಾಜ ಅವರು, ಬ್ಯಾಗ್‌ನಲ್ಲಿದ್ದ ಒಡವೆಗೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಂಡಿದ್ದಾರೆ. ಅಲ್ಲದೆ, ತಕ್ಷಣವೇ ಸಂಬಂಧಪಟ್ಟ ವಾರಸುದಾರರನ್ನು ಪತ್ತೆಹಚ್ಚಿ ಅವರ ಕೈಗೆ ಆಭರಣದ ಬ್ಯಾಗನ್ನು ಸುರಕ್ಷಿತವಾಗಿ ಒಪ್ಪಿಸಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ ಕಳೆದುಕೊಂಡು ತೀವ್ರ ಆತಂಕದಲ್ಲಿದ್ದ ಮಹಿಳೆಗೆ ಆಟೋ ಚಾಲಕನ ಈ ನಡೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ಯಾವುದೇ ಸ್ವಾರ್ಥವಿಲ್ಲದೆ ಪ್ರಾಮಾಣಿಕವಾಗಿ ಆಭರಣವನ್ನು ಹಿಂತಿರುಗಿಸಿದ ಆಟೋ ಚಾಲಕ ಬಸವರಾಜ ಅವರ ಈ ನಿಸ್ವಾರ್ಥ ಕಾರ್ಯಕ್ಕೆ ಮಂಗಳೂರು ನಗರ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಹರಿದುಬಂದಿದೆ.

 

Leave a Reply

Your email address will not be published. Required fields are marked *

error: Content is protected !!