ಮಂಗಳೂರು: ರೈಲಿನಲ್ಲಿ ಕಳುವಾಗಿದ್ದ ಲ್ಯಾಪ್‌ಟಾಪ್, ಚಿನ್ನದ ಸರ ಕೇವಲ ಕೆಲವೇ ಗಂಟೆಗಳಲ್ಲಿ ಪತ್ತೆ
ಮಂಗಳೂರು: ರೈಲು ಪ್ರಯಾಣದ ವೇಳೆ ಕಳ್ಳತನವಾಗಿದ್ದ ಲ್ಯಾಪ್‌ಟಾಪ್, ಬಂಗಾರದ ಸರ ಹಾಗೂ ಕೈಗಡಿಯಾರ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕರ್ತವ್ಯನಿರತ ಟಿಕೆಟ್ ತಪಾಸಕರ (TTE) ಸಮಯಪ್ರಜ್ಞೆಯಿಂದ ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಕೃತ್ಯ ಎಸಗಿದ ಆರೋಪಿಯನ್ನು ವಶಕ್ಕೆ ಪಡೆದು ರೈಲ್ವೆ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಿಭಾಗದ ಪ್ರಕಟಣೆ ತಿಳಿಸಿದೆ.
ಅಭಿಷೇಕ್ ಎಂಬ ಪ್ರಯಾಣಿಕರು ರೈಲು ಸಂಖ್ಯೆ 16585 ರಲ್ಲಿ ಹೊಳೆನರಸೀಪುರದಿಂದ ಮಂಗಳೂರು ಜಂಕ್ಷನ್‌ಗೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ ತಮ್ಮ ಬರ್ತ್‌ನಲ್ಲಿ ಇರಿಸಲಾಗಿದ್ದ ಲೆನೊವೊ ಲ್ಯಾಪ್‌ಟಾಪ್, ಚಾರ್ಜರ್, ಬಂಗಾರದ ಸರ, ಕೈಗಡಿಯಾರ ಹಾಗೂ ಗುರುತಿನ ಚೀಟಿಗಳಿದ್ದ ಬ್ಯಾಗ್ ಕಾಣೆಯಾಗಿರುವುದನ್ನು ಗಮನಿಸಿ, ತಕ್ಷಣವೇ ‘ರೈಲ್‌ಮದದ್’ (RailMadad 139) ಸಹಾಯವಾಣಿ ಮೂಲಕ ದೂರು ದಾಖಲಿಸಿದ್ದರು. ಹೊಳೆನರಸೀಪುರ ಮತ್ತು ಸಕಲೇಶಪುರ ನಡುವೆ ಈ ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿತ್ತು.
ದೂರಿನ ಹಿನ್ನೆಲೆಯಲ್ಲಿ ರೈಲ್ವೆ ರಕ್ಷಣಾ ಪಡೆ (RPF) ತನಿಖೆ ಆರಂಭಿಸಿತ್ತು. ಇದೇ ವೇಳೆ ಬೆಳಗಾವಿ–ಮೈಸೂರು ಮಾರ್ಗದ ರೈಲು ಸಂಖ್ಯೆ 17302 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿಟಿಇ ಚಂದ್ರ ನಾಯಕ್ ಅವರಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನ ವರ್ತನೆ ಕಂಡುಬಂದಿದೆ. ತಕ್ಷಣ ಜಾಗರೂಕರಾದ ಟಿಟಿಇ ಆತನನ್ನು ವಿಚಾರಿಸಿ ವಶಕ್ಕೆ ಪಡೆದು, ಕೆ.ಆರ್. ನಗರದ ಆರ್‌ಪಿಎಫ್ ಔಟ್‌ಪೋಸ್ಟ್‌ಗೆ ಒಪ್ಪಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಯು ಹೊಳೆನರಸೀಪುರ ಮತ್ತು ಹಾಸನ ನಡುವೆ ರೈಲು ಸಂಖ್ಯೆ 16585 ರಿಂದ ಲ್ಯಾಪ್‌ಟಾಪ್ ಬ್ಯಾಗ್ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ಬಸವರಾಜ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕೆ.ಆರ್. ನಗರದ ಸರ್ಕಾರಿ ರೈಲ್ವೆ ಪೊಲೀಸ್ (GRP) ವಶಕ್ಕೆ ನೀಡಲಾಗಿದ್ದು, ಕಳುವಾಗಿದ್ದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡು ದೂರುದಾರ ಅಭಿಷೇಕ್ ಅವರಿಗೆ ಸುರಕ್ಷಿತವಾಗಿ ಮರಳಿಸಲಾಗಿದೆ. ಟಿಟಿಇ ಚಂದ್ರ ನಾಯಕ್ ಅವರ ಈ ದಕ್ಷತೆ ಮತ್ತು ಸಮಯಪ್ರಜ್ಞೆಯನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಶ್ಲಾಘಿಸಿದೆ.






