October 9, 2026

ಸೌದಿ ಅರೇಬಿಯಾದಲ್ಲಿ ಹೌತಿ ಕ್ಷಿಪಣಿ ದಾಳಿ: ವೀಡಿಯೊ, ಸುದ್ದಿ ಪೋಸ್ಟ್ ಮಾಡದಂತೆ ಭಾರತೀಯರಿಗೆ ಸೂಚನೆ

0
image_editor_output_image305508687-1791483627454

ರಿಯಾದ್/ನವದೆಹಲಿ: ಯೆಮೆನ್ ಮೂಲದ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಹಾಗೂ ಪ್ರಮುಖ ನಗರಗಳ ಮೇಲೆ ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿರುವ ಬೆನ್ನಲ್ಲೇ, ಸೌದಿಯಲ್ಲಿರುವ ಭಾರತೀಯ ಪ್ರಜೆಗಳಿಗೆ ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತುರ್ತು ಜಾಗರೂಕತಾ ಸಲಹೆ  ಬಿಡುಗಡೆ ಮಾಡಿದೆ. ಭಾರತೀಯರು ತೀವ್ರ ಎಚ್ಚರಿಕೆಯಿಂದಿರಬೇಕು ಹಾಗೂ ಅಗತ್ಯಬಿದ್ದರೆ ಮನೆಯೊಳಗೇ ಉಳಿಯಬೇಕು ಎಂದು ಸೂಚಿಸಲಾಗಿದೆ.

ಮನೆಯೊಳಗೇ ಇರಲು ಸಲಹೆ: ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಬೇಕು, ಅನಗತ್ಯವಾಗಿ ಹೊರಗೆ ಅಡ್ಡಾಡದೆ ಅಗತ್ಯವಿದ್ದರೆ ಮನೆಯೊಳಗೇ ಇರಬೇಕು.
ಅಧಿಕೃತ ಸೂಚನೆ ಪಾಲನೆ: ಸ್ಥಳೀಯ ಸೌದಿ ಆಡಳಿತ ಮತ್ತು ರಾಯಭಾರ ಕಚೇರಿ ಅಧಿಕೃತ ಮಾರ್ಗಗಳ ಮೂಲಕ ನೀಡುವ ತನಿಖಾ ಹಾಗೂ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ವೀಡಿಯೊ, ಸುದ್ದಿ ಮರುಪೋಸ್ಟ್ ನಿಷೇಧ: ದಾಳಿ ಹಾಗೂ ಪ್ರಸ್ತುತ ನಡೆಯುತ್ತಿರುವ ಘಟನೆಗಳಿಗೆ ಸಂಬಂಧಿಸಿದ ಯಾವುದೇ ವಿಡಿಯೋಗಳು ಅಥವಾ ವದಂತಿ ಸುದ್ದಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು, ಪ್ರಸಾರ ಮಾಡುವುದು ಅಥವಾ ಮರುಪೋಸ್ಟ್ ಮಾಡುವುದನ್ನು ಸಂಪೂರ್ಣವಾಗಿ ತಡೆಯಬೇಕು ಎಂದು ಬಲವಾಗಿ ಸೂಚಿಸಲಾಗಿದೆ.

ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಜೆಡ್ಡಾದ ರಾಯಭಾರ ದೂತಾವಾಸ ಹಾಗೂ ವಿಎಫ್‌ಎಸ್ ಕೇಂದ್ರಗಳು ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯವಿದ್ದಾಗ ನವೀಕೃತ ಮಾಹಿತಿಯನ್ನು ನೀಡಲಿವೆ. ಪ್ರವಾಸಿ ಭಾರತೀಯ ಸಹಾಯತಾ ಕೇಂದ್ರದ (PBSK) 24×7 ಸಹಾಯವಾಣಿ ಸಂಖ್ಯೆ 8002471234 (ಟೋಲ್-ಫ್ರೀ) ಲಭ್ಯವಿದ್ದು, ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ಕೋರಲಾಗಿದೆ.

ವಿಮಾನಗಳ ರದ್ದು; ಕಿಂಗ್ ಖಾಲಿದ್ ವಿಮಾನ ನಿಲ್ದಾಣದಲ್ಲಿ ಸ್ಫೋಟ: ಭದ್ರತಾ ಪರಿಸ್ಥಿತಿಯನ್ನು ಪರಿಗಣಿಸಿ ಏರ್ ಇಂಡಿಯಾ, ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆಗಳು ಅಕ್ಟೋಬರ್ 10 ರವರೆಗೆ ರಿಯಾದ್‌ಗೆ ತೆರಳುವ ತಮ್ಮ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿವೆ. ರದ್ದಾದ ವಿಮಾನಗಳ ಪ್ರಯಾಣಿಕರಿಗೆ ಸಂಪೂರ್ಣ ಹಣ ಮರುಪಾವತಿ ಅಥವಾ ಉಚಿತ ದಿನಾಂಕ ಬದಲಾವಣೆಯ ಅವಕಾಶ ನೀಡಲಾಗಿದೆ.

ರಿಯಾದ್‌ನ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹಲವು ಭಾರಿ ಸ್ಫೋಟಗಳ ಶಬ್ದ ಪ್ರತಿಧ್ವನಿಸಿದ್ದು, ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳನ್ನು ನೇರವಾಗಿ ಸಂಪರ್ಕಿಸಿ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಲು ತಿಳಿಸಲಾಗಿದೆ. ಬುಧವಾರ ಹೌತಿಗಳು ನಡೆಸಿದ ದಾಳಿಯಲ್ಲಿ ಮೂವರು ಮೃತಪಟ್ಟಿರುವುದಾಗಿ ಸೌದಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಹೌತಿ ಪಡೆಗಳು ಜಾಗತಿಕ ವಿಮಾನಯಾನ ಸಂಸ್ಥೆಗಳಿಗೆ ಸೌದಿ ವಾಯುಪ್ರದೇಶ ಬಳಸದಂತೆ ಅಂತಿಮ ಎಚ್ಚರಿಕೆ ರವಾನಿಸಿವೆ.

 

Leave a Reply

Your email address will not be published. Required fields are marked *

error: Content is protected !!