October 10, 2026

ಮೂಡುಬಿದಿರೆ: ಸ್ಕೂಟರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಮೃತ್ಯು

0
image_editor_output_image-1350480602-1791609846141

ಮೂಡುಬಿದಿರೆ: ಕೋಟೆಬಾಗಿಲು ವೀರ ಮಾರುತಿ ದೇವಸ್ಥಾನದ ಬಳಿಯ ತಿರುವಿನಲ್ಲಿ ಸಂಭವಿಸಿದ ಭೀಕರ ಸ್ಕೂಟರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಸ್ಕೂಟರ್ ಸವಾರ ದೀಕ್ಷಿತ್ (18) ಬುಧವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ದುರಂತ ಅಪಘಾತದಲ್ಲಿ ಮೃತಪಟ್ಟ ಯುವಕರ ಸಂಖ್ಯೆ ಎರಡಕ್ಕೇರಿದೆ.

ಮೃತ ದೀಕ್ಷಿತ್ (18) ಕೋಟೆಬಾಗಿಲಿನ ಸ್ಥಳೀಯ ನಿವಾಸಿ ಚಂದು ಪೂಜಾರಿ ಅವರ ಪುತ್ರ. ಹೈಸ್ಕೂಲ್ ಶಿಕ್ಷಣ ಮುಗಿಸಿದ್ದ ಈತ ಖಾಸಗಿಯಾಗಿ ಕೆಲಸ ಮಾಡಿಕೊಂಡಿದ್ದ. ದೀಕ್ಷಿತ್ ತನ್ನ ಸ್ನೇಹಿತ ಪ್ರಶ್ವಿತ್ (17) ಅವರನ್ನು ಸ್ಕೂಟರ್ ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಕೋಟೆಬಾಗಿಲಿನಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದಾಗ ವೀರ ಮಾರುತಿ ದೇವಸ್ಥಾನದ ಬಳಿಯ ತಿರುವಿನಲ್ಲಿ ಸ್ಕೂಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು.

 

ಅಪಘಾತದ ರಭಸಕ್ಕೆ ಹಿಂಬದಿ ಸವಾರ ಪ್ರಶ್ವಿತ್ ಹೆಗ್ಡೆ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರೆ, ಸ್ಕೂಟರ್ ಚಲಾಯಿಸುತ್ತಿದ್ದ ದೀಕ್ಷಿತ್ ಅವರ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಬುಧವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.

ಮೃತ ದೀಕ್ಷಿತ್ ಅವರ ಅಂತ್ಯಸಂಸ್ಕಾರ ಗುರುವಾರ ಸ್ವಗ್ರಾಮದಲ್ಲಿ ನೆರವೇರಿತು. ಒಂದೇ ಅಪಘಾತದಲ್ಲಿ ಇಬ್ಬರು ಯುವಕರನ್ನು ಕಳೆದುಕೊಂಡ ಎರಡೂ ಕುಟುಂಬಗಳ ಪೋಷಕರ ಹಾಗೂ ಬಂಧು-ಮಿತ್ರರ ರೋದನ ಮುಗಿಲು ಮುಟ್ಟಿತ್ತು. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!