ದಿಲ್ಲಿ: ಆರು ಅಂತಸ್ತಿನ ಕಟ್ಟಡ ಕುಸಿತ: ಮೃತರ ಸಂಖ್ಯೆ ಆರಕ್ಕೇರಿಕೆ, ಕಟ್ಟಡದ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ
ದೆಹಲಿ: ದಿಲ್ಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್ ಸಮೀಪದ ಸತ್ಯ ನಿಕೇತನದಲ್ಲಿ ರವಿವಾರ ಮಧ್ಯಾಹ್ನ ಐದು ಅಂತಸ್ತಿನ ವಿದ್ಯಾರ್ಥಿಗಳ ಪಿಜಿ (ಪೇಯಿಂಗ್ ಗೆಸ್ಟ್) ಕಟ್ಟಡ ಕುಸಿದ ಘಟನೆಯಲ್ಲಿ ಮೃತರ ಸಂಖ್ಯೆ ಆರಕ್ಕೇರಿದೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಐದು ಮಂದಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ.
ಸುಮಾರು 40 ರಿಂದ 50 ವರ್ಷ ಹಳೆಯದಾದ ಈ ಕಟ್ಟಡದ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಈ ಪ್ರದೇಶವು ವಿದ್ಯಾರ್ಥಿ ನಿಲಯಗಳು, ಪಿಜಿಗಳು ಹಾಗೂ ಹೋಟೆಲ್ಗಳಿಂದ ಕೂಡಿದ್ದು, ಕಿರಿದಾದ ರಸ್ತೆಗಳನ್ನು ಹೊಂದಿದೆ.
ಸ್ಥಳೀಯರ ಪ್ರಕಾರ, ‘ಹಾಸ್ಟೆಲ್ ಡೇಝ್’ ಎಂದೇ ಹೆಸರಾಗಿದ್ದ ಈ ಕಟ್ಟಡದ ನೆಲಮಹಡಿಯಲ್ಲಿ (ಬೇಸ್ಮೆಂಟ್ ) ರವಿವಾರ ಮಧ್ಯಾಹ್ನ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಸುಮಾರು ಮಧ್ಯಾಹ್ನ 1:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಅವಶೇಷಗಳಡಿ ಇನ್ನೂ 30ರಿಂದ 40 ಮಂದಿ ಸಿಲುಕಿರುವ ಸಾಧ್ಯತೆಯಿದೆ ಎಂದು ಪ್ರತ್ಯಕ್ಷದರ್ಶಿಗಳು ಅಂದಾಜಿಸಿದ್ದಾರೆ.
ಕಟ್ಟಡ ಕುಸಿತದ ಸಂಬಂಧ ಗುರುಗ್ರಾಮ ನಿವಾಸಿ ಹಾಗೂ ಕಟ್ಟಡದ ಮಾಲೀಕ ಹರಿರಾಮ್ ಬನ್ಸಲ್ ವಿರುದ್ಧ ದಿಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆತನ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಕಟ್ಟಡದಲ್ಲಿ ಸುಮಾರು 15 ಕೊಠಡಿಗಳಿದ್ದು, ಪ್ರತಿ ಕೊಠಡಿಯಲ್ಲಿ ಇಬ್ಬರು ಅಥವಾ ಮೂವರು ವಿದ್ಯಾರ್ಥಿಗಳು ತಂಗಿದ್ದರು ಎನ್ನಲಾಗಿದೆ. ಬಹುತೇಕ ವಿದ್ಯಾರ್ಥಿಗಳು ಕೇರಳ, ಹರಿಯಾಣ ಹಾಗೂ ಉತ್ತರ ಪ್ರದೇಶ ಮೂಲದವರಾಗಿದ್ದು, ಮೋತಿಲಾಲ್ ನೆಹರು ಕಾಲೇಜು, ಆತ್ಮರಾಮ್ ಸನಾತನ ಧರ್ಮ ಕಾಲೇಜು ಮತ್ತು ವೆಂಕಟೇಶ್ವರ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಾರಾಂತ್ಯವಾಗಿದ್ದರಿಂದ ಹಲವು ವಿದ್ಯಾರ್ಥಿಗಳು ಮನೆಗಳಿಗೆ ತೆರಳಿದ್ದ ಕಾರಣ, ಸಂಭವಿಸಬಹುದಾಗಿದ್ದ ಭಾರೀ ಪ್ರಾಣಹಾನಿ ತಪ್ಪಿದಂತಾಗಿದೆ.





