ಸ್ಕೂಟಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಕುತ್ತಿಗೆಗೆ ಗಾಳಿಪಟ ದಾರ ಸಿಲುಕಿ ಸಾವು
ಹುಬ್ಬಳ್ಳಿ: ಬೆಳಗಾವಿಯಲ್ಲಿ ಗಾಳಿಪಟ ಹಾರಿಸುವ ಮಾರಕ ಮಾಂಜಾ ದಾರಕ್ಕೆ ಯುವಕ ಬಲಿಯಾದ ಬೆನ್ನಲ್ಲೇ, ಈಗ ಹುಬ್ಬಳ್ಳಿಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ ಸ್ಥಳದಲ್ಲೇ ಪ್ರಾಣಬಿಟ್ಟಿರುವ ಅತ್ಯಂತ ಭೀಕರ ಘಟನೆ ಗುರುವಾರ ನಡೆದಿದೆ.
ಭರತ್ ನಗರದ ನಿವಾಸಿ ಹಾಗೂ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ವಿದ್ಯಾ ಮಂಜುನಾಥ ಗೌಡರ (38) ಮೃತ ದುರ್ದೈವಿ.
ವಿದ್ಯಾ ಅವರು ಎಂದಿನಂತೆ ಗುರುವಾರ ಬೆಳಿಗ್ಗೆ ತಮ್ಮ ಸ್ಕೂಟಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಹುಬ್ಬಳ್ಳಿಯ ಶಿವಶಂಕರ ಕಾಲೋನಿ ಸಮೀಪದ ಕಾರವಾರ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ, ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ಮಾಂಜಾ ದಾರವು ಅನಿರೀಕ್ಷಿತವಾಗಿ ಅವರ ಕುತ್ತಿಗೆಗೆ ಸುತ್ತಿಕೊಂಡಿದೆ. ದಾರವು ಕುತ್ತಿಗೆಗೆ ಬಿಗಿದುಕೊಂಡಿದ್ದರಿಂದ ವಾಹನದ ಮೇಲಿನ ನಿಯಂತ್ರಣ ತಪ್ಪಿ ವಿದ್ಯಾ ಅವರು ರಸ್ತೆಗೆ ಬಿದ್ದು ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅವರು, “ಮಾಂಜಾ ದಾರದಿಂದ ಅಮೂಲ್ಯ ಜೀವವೊಂದು ಕಳೆದುಹೋಗಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಈ ಕೃತ್ಯಕ್ಕೆ ಕಾರಣರಾದವರ ಪತ್ತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ಜೊತೆಗೆ, ಗಾಳಿಪಟ ಹಾರಿಸಲು ಅಥವಾ ಅಂಗಡಿಗಳಲ್ಲಿ ಮಾರಾಟ ಮಾಡಲು ಮಾಂಜಾ ದಾರ ಬಳಸುವವರ ವಿರುದ್ಧ ಮುಂಗಾಣಿಕೆ ಇಲ್ಲದೆ ನೇರವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಕಮಿಷನರ್ ಕಠಿಣ ಎಚ್ಚರಿಕೆ ನೀಡಿದ್ದಾರೆ.




