October 23, 2026

ಬೋಳಿಯಾರ್ ಡಬಲ್ ಮರ್ಡರ್ ಕೇಸ್ ಮಹಜರು ವೇಳೆ ಆರೋಪಿ ಮೇಲೆ ಹಲ್ಲೆಗೆ ಯತ್ನ

0
image_editor_output_image95999137-1792699830704

ಮಂಗಳೂರು: ಬೋಳಿಯಾರ್ ಜೋಡಿ ಕೊಲೆ ಪ್ರಕರಣದ ತನಿಖೆ ವೇಳೆ ಮಹಜರು ನಡೆಸುತ್ತಿದ್ದ ಸಂದರ್ಭದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕೊಲೆ ಆರೋಪಿಯನ್ನು ಸ್ಥಳಕ್ಕೆ ಕರೆತಂದಾಗ ಆತನ ಮೇಲೆ ಮೃತರ ಸ್ನೇಹಿತರು ಹಲ್ಲೆ ನಡೆಸಲು ಮುಂದಾದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೋಳಿಯಾರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಬಳಿಕ ಸ್ಕೂಟರ್ ಗೆ ಪಿಕಪ್ ಡಿಕ್ಕಿಯಾಗಿ ಇಬ್ಬರು ಯುವಕರು ಸಾವನಪ್ಪಿದ್ದರು, ಈ ಪ್ರಕರಣದ ಪ್ರಮುಖ ಆರೋಪಿ ಮಹಮ್ಮದ್ ಹಫೀಝ್ ಅಲಿಯಾಸ್ ಅಪ್ಪಿ ಎಂಬಾತನನ್ನು ತನಿಖಾಧಿಕಾರಿಗಳ ನಿರ್ದೇಶನದಂತೆ ಪೊಲೀಸರು ಮಹಜರು ಪ್ರಕ್ರಿಯೆಗಾಗಿ ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ದಿದ್ದರು.

ಅಕ್ಟೋಬರ್ 21ರಂದು ಮಧ್ಯಾಹ್ನ 2:50ರ ಸುಮಾರಿಗೆ ಪಿಸಿ ಮುಝಂಬಿಲ್ ಹಾಗೂ ಪಿಸಿ ಮಂಜುನಾಥ್ ಅವರ ಭದ್ರತೆಯಲ್ಲಿ, ಪಂಚರು ಹಾಗೂ ತನಿಖಾ ಸಹಾಯಕರೊಂದಿಗೆ ಬೋಳಿಯಾರು ಗ್ರಾಮದ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಬಳಿಗೆ ಆರೋಪಿಯನ್ನು ಕರೆತರಲಾಗಿತ್ತು. ಆರೋಪಿ ತಾನು ಕೃತ್ಯ ಎಸಗಿದ ಸ್ಥಳವನ್ನು ಪೊಲೀಸರಿಗೆ ತೋರಿಸಿಕೊಟ್ಟು ಮಹಜರು ತಯಾರಿಸುತ್ತಿದ್ದ ಸಮಯ, ಮೃತರಾದ ಮೊಹಮ್ಮದ್ ಜುನೈದ್ ಹಾಗೂ ಮೊಹಮ್ಮದ್ ಅರ್ಫಾಜ್ ಅವರ ಸ್ನೇಹಿತರಾದ ಅಬ್ದುಲ್ ರಹಿಮಾನ್ ಹಾಗೂ ಜಾಹೀರ್ ಎಂಬುವರು ಪಡೀಲ್ ಕಡೆಯಿಂದ ಏಕಾಏಕಿ ಅಲ್ಲಿಗೆ ಧಾವಿಸಿ ಬಂದಿದ್ದಾರೆ.

ತಮ್ಮ ಸ್ನೇಹಿತರನ್ನು ಭೀಕರವಾಗಿ ಕೊಲೆ ಮಾಡಿದ್ದಾನೆಂಬ ತೀವ್ರ ದ್ವೇಷ ಹಾಗೂ ಆಕ್ರೋಶದಿಂದ ಈ ಇಬ್ಬರು ವ್ಯಕ್ತಿಗಳು ಕೊಲೆ ಆರೋಪಿ ಹಫೀಝ್ ಮೇಲೆ ಮುನ್ನುಗ್ಗಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ.

ಆರೋಪಿಯ ಮೇಲೆ ಹಲ್ಲೆ ನಡೆಸಲು ಮುಂದಾದವರನ್ನು ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ತಕ್ಷಣವೇ ತಡೆದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೊಲೀಸ್ ಭದ್ರತೆಯಲ್ಲಿದ್ದ ಆರೋಪಿಯ ಮೇಲೆ ಹಲ್ಲೆಗೆ ಯತ್ನಿಸಿ, ಅಧಿಕೃತ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ಅಬ್ದುಲ್ ರಹಿಮಾನ್ ಹಾಗೂ ಜಾಹೀರ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!