ಕುಸ್ತಿ ಫೆಡರೇಶನ್ ನಡೆಸಲು ಸಮಿತಿ ರಚಿಸುವಂತೆ ಭಾರತೀಯ ಒಲಿಂಪಿಕ್ ಸಂಸ್ಥೆಗೆ ಸೂಚಿಸಿದ ಕೇಂದ್ರ ಸರಕಾರ
ನವದೆಹಲಿ: ಕುಸ್ತಿಪಟುಗಳ ಗದ್ದಲದ ನಡುವೆ ಹೊಸದಾಗಿ ಚುನಾಯಿತ ಆಡಳಿತ ಮಂಡಳಿಯನ್ನು ಅಮಾನತುಗೊಳಿಸಿರುವ ಕ್ರೀಡಾ ಸಚಿವಾಲಯ, ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ)ಯನ್ನು ನಡೆಸಲು ತಾತ್ಕಾಲಿಕ ಸಮಿತಿಯನ್ನು ರಚಿಸುವಂತೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ಗೆ (ಐಒಎ) ಸೂಚಿಸಿದೆ ಎಂದು ndtv.com ವರದಿ ಮಾಡಿದೆ.
ಡಬ್ಲ್ಯುಎಫ್‌ಐ ಸದಸ್ಯರ ಬಗ್ಗೆ ಮತ್ತು ಭಾರತದ ಏಸ್ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರೊಂದಿಗೆ ಅವರ ಸಂಬಂಧ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಖಾಸಗಿ ಮಾಧ್ಯಮದ ವರದಿಯ ಪ್ರಕಾರ, ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಸೇರಿದಂತೆ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ವಿಷಯಗಳ ಮೇಲ್ವಿಚಾರಣೆ ಮತ್ತು ಆಡಳಿತಕ್ಕಾಗಿ ಮಧ್ಯಂತರ ಸಮಿತಿಯನ್ನು ರಚಿಸುವಂತೆ ಕ್ರೀಡಾ ಸಚಿವಾಲಯವು ಭಾರತೀಯ ಒಲಿಂಪಿಕ್ ಸಂಸ್ಥೆಗೆ (ಐಒಎ) ಕೇಳಿದೆ ಎನ್ನಲಾಗಿದೆ.
ಡಬ್ಲ್ಯುಎಫ್‌ಐನ ಮಾಜಿ ಪದಾಧಿಕಾರಿಗಳ ಪ್ರಭಾವ ಮತ್ತು ನಿಯಂತ್ರಣದಿಂದ ಉದ್ಭವಿಸುವ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಡಬ್ಲ್ಯುಎಫ್‌ಐನ ಆಡಳಿತ ಮತ್ತು ಸಮಗ್ರತೆಯ ಬಗ್ಗೆ ಗಂಭೀರ ಕಳವಳಗಳು ಉದ್ಭವಿಸಿವೆ ಎಂದು ಕೇಂದ್ರದ ಅಧೀನ ಕಾರ್ಯದರ್ಶಿ ತರುಣ್ ಪರೀಕ್ ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ.