ಅನುಗ್ರಹ ಮಹಿಳಾ ಪದವಿ ಕಾಲೇಜು ಕಲ್ಲಡ್ಕದ ವಿದ್ಯಾರ್ಥಿನಿಯರಿಂದ ನ್ಯಾಯಾಲಯ ಭೇಟಿ
ಬಂಟ್ವಾಳ: ಅನುಗ್ರಹ ಮಹಿಳಾ ಕಾಲೇಜು,ಕಲ್ಲಡ್ಕ ಇದರ ಮಾನವ ಹಕ್ಕುಗಳ ರಕ್ಷಣಾ ಕ್ಲಬ್ ವತಿಯಿಂದ ದ್ವಿತೀಯ ಬಿ.ಎ.ಮತ್ತು ತೃತೀಯ ಬಿ.ಎ. ವಿದ್ಯಾರ್ಥಿನಿಯರಿಗೆ ನ್ಯಾಯಾಂಗ ವ್ಯವಸ್ಥೆಯ ಕುರಿತು ಪ್ರಾಯೋಗಿಕ ಅರಿವು ನೀಡುವ ಉದ್ದೇಶದಿಂದ ಬಿ.ಸಿ.ರೋಡ್ ನಲ್ಲಿರುವ ಬಂಟ್ವಾಳದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯಕ್ಕೆ ಭೇಟಿಯನ್ನು ಆಯೋಜಿಸಲಾಯಿತು.

ನ್ಯಾಯಾಲಯಕ್ಕೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿನಿಯರು ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಗಳ ಕಾರ್ಯವಿಧಾನ, ವಿಚಾರ ನಡೆಯುವ ರೀತಿ ಹಾಗೂ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ನ್ಯಾಯಾಲಯದ ವಾತಾವರಣವನ್ನು ನೇರವಾಗಿ ಅನುಭವಿಸುವ ಮೂಲಕ ವಿದ್ಯಾರ್ಥಿನಿಯರಿಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಹೆಚ್ಚಿನ ತಿಳುವಳಿಕೆ ದೊರೆಯಿತು. ಸುಮಾರು 20 ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಬೆಳ್ತಂಗಡಿಯ ವಕೀಲರಾದ ಶ್ರೀಯುತ ಶಿವಯ್ಯ ಇವರಲ್ಲಿ ವಿದ್ಯಾರ್ಥಿನಿಯರು ನೇರವಾದ ಸಂವಾದವನ್ನು ನಡೆಸಿದರು.
ಇತರ ವಕೀಲರಾದಂತಹ ಉಮರ್ ಫಾರೂಕ್ ಹಾಗೂ ದಿಲ್ ನಾಝ್ ಇವರಲ್ಲಿ ವಕೀಲ ವೃತ್ತಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಈ ಭೇಟಿ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕವಾಗಿ ಬಹಳ ಉಪಯುಕ್ತವಾಗಿದ್ದು, ಕಾನೂನು ಮತ್ತು ಮಾನವ ಹಕ್ಕುಗಳ ಬಗ್ಗೆ ಅರಿವು ಹೆಚ್ಚಿಸಲು ಸಹಾಯವಾಯಿತು. ವಕೀಲರಾದ ತುಳಸಿದಾಸ್ ವಿಟ್ಲ ಇವರ ಮಾರ್ಗದರ್ಶನದ ಮೇರೆಗೆ ಈ ಭೇಟಿಯನ್ನು ಆಯೋಜಿಸಲಾಗಿತ್ತು.
ವಿದ್ಯಾರ್ಥಿನಿಯರೊಂದಿಗೆ ಮಾರ್ಗದರ್ಶಕರಾಗಿ ಕಾಲೇಜಿನ ಉಪನ್ಯಾಸಕಿಯರಾದ ಶ್ರೀಮತಿ ತಾರಾಕ್ಷಿ ರಾಜ್ಯಶಾಸ್ತ್ರ ವಿಭಾಗ, ಹಾಗೂ ಕುಮಾರಿ ಬಬಿತ ಅರ್ಥಶಾಸ್ತ್ರ ವಿಭಾಗ ಇವರು ಭಾಗವಹಿಸಿದ್ದರು.




