March 17, 2026

ಮಹಿಳೆಯರೊಂದಿಗೆ ಅನುಚಿತ ವರ್ತನೆ: ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್‌ ಪಿ.ಜಿ ಸೇವೆಯಿಂದ ಅಮಾನತು

0
IMG-20260317-WA0004.jpg

ಮಂಗಳೂರು: ಮಹಿಳೆಯರೊಂದಿಗೆ ಅನುಚಿತ ವರ್ತನೆ ಹಾಗೂ ಪ್ರಶ್ನಾರ್ಹ ನಡವಳಿಕೆ ತೋರಿದ ಆರೋಪದ ಹಿನ್ನೆಲೆಯಲ್ಲಿ ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್‌ ಪಿ.ಜಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಮಂಗಳೂರು ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಎಸಿಪಿ ಅವರು ಸಲ್ಲಿಸಿದ ಸುದೀರ್ಘ ತನಿಖಾ ವರದಿಯಲ್ಲಿ ಇನ್ಸ್‌ಪೆಕ್ಟರ್ ಅವರ ಆಡಿಯೋ ಮತ್ತು ವಿಡಿಯೋ ಪುರಾವೆಗಳು ಅಸಭ್ಯವಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮಂಗಳೂರು ಉತ್ತರ ವಲಯ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಶ್ರೀಕಾಂತ್‌ ಅವರು ನಡೆಸಿದ ತನಿಖೆಯಲ್ಲಿ ಹಲವು ಸ್ಫೋಟಕ ಮಾಹಿತಿ ಹಾಗೂ ಸತ್ಯಾಂಶಗಳು ಹೊರಬಂದಿದ್ದು, ಇನ್ಸ್‌ಪೆಕ್ಟರ್ ವಿರುದ್ಧ ಹೇಳಿಕೆ ನೀಡಿದ್ದ ಸುಮತಿ ನಾಯಕ್ ಮತ್ತು ಅವರ ಸಹೋದರಿಯ ನಡುವೆ ಕೌಟುಂಬಿಕ ಕಲಹಗಳಿದ್ದು, ಇಬ್ಬರ ವಿರುದ್ಧವೂ ತಲಾ ಎರಡು ಪ್ರಕರಣಗಳು ದಾಖಲಾಗಿವೆ. ಇನ್ಸ್‌ಪೆಕ್ಟರ್ ವಿರುದ್ಧದ ದೂರು ಸೇರಿದಂತೆ ಬಹುತೇಕ ಪ್ರಕರಣಗಳು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಪಡೆದಿದ್ದು, ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಿದೆ. ಎರಡನೇ ಮಹಿಳೆ ಅವಿತ ಮಿನೇಜಸ್ ಅವರ ಪತಿಯ ವಿರುದ್ಧ 4 ಪ್ರಕರಣಗಳಿದ್ದು, ಬಡವರ ಕಿಡ್ನಿ ಚಿಕಿತ್ಸೆಗೆ ಸಂಗ್ರಹಿಸಿದ ಹಣದ ದುರುಪಯೋಗದ ಆರೋಪ ಇವರ ಮೇಲಿದೆ. ಇನ್ಸ್‌ಪೆಕ್ಟರ್ ಲಂಚ ಕೇಳಿದ್ದಾರೆ ಎನ್ನಲಾದ ಸ್ಥಳ ಸಿಸಿಟಿವಿ ವ್ಯಾಪ್ತಿಯಲ್ಲಿದ್ದು, ಅಲ್ಲಿ ಲಂಚ ಕೇಳಿದ ಅಥವಾ ಕಿರುಕುಳ ನೀಡಿದ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ವರದಿ ಹೇಳಿದೆ.

ತನಿಖಾ ವರದಿಯ ಪ್ರಕಾರ, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ಮಹಿಳೆಯರು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೋ-ವಿಡಿಯೋದಲ್ಲಿರುವ ಮಹಿಳೆಯರು ಬೇರೆ ಬೇರೆಯಾಗಿದ್ದಾರೆ. ಆದರೆ, ವೈರಲ್ ಆಗಿರುವ ವಿಡಿಯೋದಲ್ಲಿ ಇನ್ಸ್‌ಪೆಕ್ಟರ್ ಅವರ ನಡವಳಿಕೆ ತೀರಾ ಪ್ರಶ್ನಾರ್ಹವಾಗಿದ್ದು, ಫೋನ್‌ನಲ್ಲಿ ಮಹಿಳೆಯೊಬ್ಬರ ಜೊತೆ ಅತ್ಯಂತ ಅಸಭ್ಯವಾಗಿ ಮಾತನಾಡಿರುವುದು ಕಂಡುಬಂದಿದೆ. ಆಡಿಯೋ ಮತ್ತು ವಿಡಿಯೋದಲ್ಲಿ ಕಂಡುಬಂದ ಮಹಿಳೆಯರು ಇನ್ಸ್‌ಪೆಕ್ಟರ್ ವಿರುದ್ಧ ಅಧಿಕೃತ ದೂರು ನೀಡಲು ಸದ್ಯಕ್ಕೆ ನಿರಾಕರಿಸಿದ್ದಾರೆ. ಆದರೆ, ಭವಿಷ್ಯದಲ್ಲಿ ಅವರು ಹೇಳಿಕೆ ನೀಡಲು ಇಚ್ಛಿಸಿದರೆ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಎಸಿಪಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಕಮಿಷನರ್ ಆದೇಶ:
ಆರೋಪಿಗಳ ಹಿನ್ನೆಲೆ ಏನೇ ಇದ್ದರೂ, ಒಬ್ಬ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯಾಗಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಇಲಾಖೆಯ ಘನತೆಗೆ ಕುಂದು ತಂದಿದೆ ಎಂದು ಮಂಗಳೂರು ಕಮಿಷನರ್ ಸುಧೀರ್‌ ಕುಮಾರ್‌ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಇನ್ಸ್‌ಪೆಕ್ಟರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಇಲಾಖಾ ಮಟ್ಟದ ಸವಿಸ್ತಾರ ವಿಚಾರಣೆ ನಡೆಯಲಿದೆ ಎಂದು ಮಾದ್ಯಮಕ್ಕೆ ತಿಳಿಸಿದ್ದಾರೆ.‌

ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದ್ದೇನು?
ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಕಿರುಕುಳ ಆರೋಪದ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಮಾತನಾಡಿ, ಸಂತ್ರಸ್ತೆ ಈ ಹಿಂದೆ ಜೂನ್ ನಲ್ಲಿ ದೂರು ಕೊಟ್ಟಿದ್ದರು. ಅದರ ಪ್ರಕಾರ ಎಸ್ಪಿ ಅವರಿಗೆ ಪತ್ರ ಬರೆಯಲಾಗಿತ್ತು, ಈಗ ಮತ್ತಷ್ಟು ಸಂತ್ರಸ್ತೆಯರು ಇದ್ದಾರೆ ಅಂತ ಗೊತ್ತಾಗ್ತಾ ಇದೆ. ಈ ಬಗ್ಗೆಯೂ ಎಸ್ಪಿ ಹಾಗೂ ಕಮೀಷನರ್ಗೆ ವರದಿ ಕೇಳಲಾಗಿದೆ ಜೊತೆಗೆ ಇನ್ಸ್‌ಪೆಕ್ಟರ್ ವಿರುದ್ಧ ಏನ್ ಕ್ರಮ ಆಗಿದೆ ಅಂತಾನೂ ಕೇಳಿದ್ದೇನೆ, ನೋಡೋಣ ಏನು ವರದಿಯನ್ನು ಕೊಡ್ತಾರೆ ಅಂತ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಹೇಳಿದ್ದರು.

ಅಧಿಕೃತ ದೂರು ನೀಡದ ಸಂತ್ರಸ್ತರು: ವಿಡಿಯೋದಲ್ಲಿರುವ ಮಹಿಳೆಯರು ಇನ್ಸ್‌ಪೆಕ್ಟರ್ ವಿರುದ್ಧ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದರೂ ಕೂಡ ಮೇಲ್ನೋಟಕ್ಕೆ ಅಧಿಕಾರಿಯ ನಡವಳಿಕೆ ಸರಿಯಿಲ್ಲದ ಕಾರಣ ಅವರನ್ನು ಅಮಾನತು ಮಾಡಿ ಮುಂದಿನ ವಿಚಾರಣೆಗೆ ಆದೇಶಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!