ಪಾಕಿಸ್ತಾನದ ಐಎಸ್‌ಐ ಪರವಾಗಿ ಬೇಹುಗಾರಿಕೆ: ಆದರ್ಶ್ ಕುಮಾರ್ ಅರೆಸ್ಟ್
ಲಕ್ಕೋ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಬೇಹುಗಾರಿಕೆ ನಡೆಸಿ ಭಾರತೀಯ ನೌಕಾಪಡೆಯ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ನೌಕಾಪಡೆ ಸಿಬ್ಬಂದಿಗೆ ಸಂಬಂಧಿಸಿದ ಶಂಕಿತ ಬೇಹುಗಾರಿಕೆ ಚಟುವಟಿಕೆಗಳ ಕುರಿತು ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧನ ಕ್ರಮ ಕೈಗೊಂಡಿದೆ.
ಬಂಧಿತ ಆದರ್ಶ್ ಕುಮಾರ್ (ಲಕ್ಕಿ) ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಕಗರೋಲ್ ನಿವಾಸಿ. ಆತ ಕೇರಳದ ಕೊಚ್ಚಿಯಲ್ಲಿರುವ ಭಾರತೀಯ ನೌಕಾಪಡೆಯ ದಕ್ಷಿಣ ಕಮಾಂಡ್ ನೆಲೆಯಲ್ಲಿ ನಿಯೋಜಿಸಲ್ಪಟ್ಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಆದರ್ಶ್ ಕುಮಾರ್ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಗೆ ಸಂಪರ್ಕ ಹೊಂದಿರುವ ಹ್ಯಾಂಡ್ಲರ್ ಗಳಿಗೆ ನೌಕಾಪಡೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದನೆಂದು ಆರೋಪಿಸಲಾಗಿದೆ.
ಡಿಜಿಟಲ್ ಸಂವಹನದ ಮೂಲಕ ಆತ ಪ್ರಮುಖ ನೌಕಾ ಮಾಹಿತಿಯ ಛಾಯಾಚಿತ್ರಗಳು ಮತ್ತು ವಿವರಗಳನ್ನು ಹಂಚಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




