November 5, 2026

ಬಸ್ಸಿನ ಚಕ್ರಗಳ ಅಡಿಗೆ ಬಿದ್ದ ಮಹಿಳಾ ಕಂಡಕ್ಟರ್ ಸಾವು

a8301f8c-6c1a-4b75-916c-3c9dd01ebc21

ಹೈದರಾಬಾದ್: ಬಸ್ಸಿನಲ್ಲಿ ಪ್ರಯಾಣಿಕಳೊಂದಿಗೆ ಉಂಟಾದ ಸಣ್ಣ ಮಾತಿನ ಚಕಮಕಿಯ ವೇಳೆ ಬಸ್ಸಿನಿಂದ ಹೊರಗೆ ತಳ್ಳಲ್ಪಟ್ಟು ಬಸ್ಸಿನ ಚಕ್ರಗಳ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 24 ವರ್ಷದ ಯುವ ಮಹಿಳಾ ಕಂಡಕ್ಟರ್ ಪ್ರವಳಿಕಾ ಅವರು ಹೈದರಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ದಾರುಣವಾಗಿ ಮೃತಪಟ್ಟ ಪ್ರವಳಿಕಾ ಅವರು ತೆಲಂಗಾಣ ಸಾರಿಗೆ ಸಂಸ್ಥೆಯ ಮನುಗುರು ಡಿಪೋದಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಕಳೆದ ತಿಂಗಳು ಅಕ್ಟೋಬರ್ 25 ರಂದು ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯ ಅಶ್ವಪುರಂ ವ್ಯಾಪ್ತಿಯ ಮಿತ್ತಗುಡೆಮ್ನಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕಳೊಬ್ಬಳ ಜೊತೆ ಟಿಕೆಟ್ ವಿಷಯಕ್ಕೆ ಸಂಬಂಧಿಸಿದಂತೆ ಸಣ್ಣ ಜಗಳ ಉಂಟಾಗಿತ್ತು. ಈ ವೇಳೆ ಆಕ್ರೋಶಗೊಂಡ ಮಹಿಳಾ ಪ್ರಯಾಣಿಕೆ ಕಂಡಕ್ಟರ್ ಪ್ರವಳಿಕಾ ಅವರನ್ನು ಬಸ್ಸಿನ ಬಾಗಿಲಿನಿಂದ ಆಚೆಗೆ ತಳ್ಳಿದ್ದಾಳೆ. ಪರಿಣಾಮವಾಗಿ ಪ್ರವಳಿಕಾ ಅವರು ಚಲಿಸುತ್ತಿದ್ದ ಬಸ್ಸಿನಿಂದ ರಸ್ತೆಗೆ ಬಿದ್ದು, ಬಸ್ಸಿನ ಹಿಂಬದಿಯ ಚಕ್ರಗಳು ಆಕೆಯ ಎರಡೂ ಕಾಲುಗಳ ಮೇಲೆ ಹರಿದಿದ್ದವು. ತೀವ್ರ ರಕ್ತಸ್ರಾವದಿಂದ ಗಂಭೀರ ಗಾಯಗೊಂಡಿದ್ದ ಆಕೆಯನ್ನು ತಕ್ಷಣವೇ ಹೈದರಾಬಾದ್ನ ಪ್ರಸಿದ್ಧ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ತಿಳಿದ ತಕ್ಷಣ ತೆಲಂಗಾಣ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್ ಹಾಗೂ ಹಿರಿಯ ಆರ್ಟಿಸಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ, ಅತ್ಯುತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದರು.
ಆಕೆಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರಾದರೂ, ತೀವ್ರ ವೈದ್ಯಕೀಯ ತೊಡಕು ಉಂಟಾಗಿ ವೈದ್ಯರ ಸತತ ಪ್ರಯತ್ನಗಳು ವ್ಯರ್ಥವಾಗಿ ಮಂಗಳವಾರ ಪ್ರವಳಿಕಾ ಮೃತಪಟ್ಟಿದ್ದಾರೆ. ಮಹಿಳಾ ಕಂಡಕ್ಟರ್ ಕರ್ತವ್ಯದಲ್ಲಿದ್ದಾಗಲೇ ಅಮಾನವೀಯವಾಗಿ ಆಕೆಯನ್ನು ತಳ್ಳಿ ಸಾವಿಗೆ ಕಾರಣರಾದ ಆರೋಪಿ ಮಹಿಳೆಯ ವಿರುದ್ಧ BNS 2023 ರ ಕಠಿಣ ಕೊಲೆ ಪ್ರಕರಣ ದಾಖಲಿಸಿ ಬಂಧಿಸಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಆರ್ಟಿಸಿ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ಬುಧವಾರ ಮನುಗುರು ಡಿಪೋ ಬಂದ್ಗೆ ಕರೆ ನೀಡಿದೆ.

error: Content is protected !!