ಮಂಗಳೂರು: ಹೊಸಬೆಟ್ಟು ಸೋಮನಾಥ್ ಪ್ರಕರಣ ತನಿಖೆ ಸಿಐಡಿಗೆ ವರ್ಗಾವಣೆ
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ನಿವಾಸಿ ಸೋಮನಾಥ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ಇಲಾಖೆಗೆ ವರ್ಗಾಯಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಮಹಾನಿರೀಕ್ಷಕ ಡಾ. ಎಂ.ಎ. ಸಲೀಂ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಸುತ್ತ ಬೆಳೆದ ಗಂಭೀರ ಸ್ವರೂಪದ ಬೆಳವಣಿಗೆಗಳು ಹಾಗೂ ಸಾರ್ವಜನಿಕ ಒತ್ತಡದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸೋಮನಾಥ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಒಟ್ಟು ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ಸಿಐಡಿ ವ್ಯಾಪ್ತಿಗೆ ವಹಿಸಲಾಗಿದೆ.
ಸೋಮನಾಥ್ ಅವರ ಆತ್ಮಹತ್ಯೆ ಪ್ರಕರಣ: (ಸುರತ್ಕಲ್ ಠಾಣೆ).ದೆಹಲಿ ಮೂಲದ ಮಹಿಳೆ ನೀಡಿದ್ದ ದೂರು: (ಬೆದರಿಕೆ ಮತ್ತು ನಿಂದನೆ ಆರೋಪ).ಸೋಮನಾಥ್ ಪತ್ನಿ ನೀಡಿದ ದೂರು: (ಪೊಲೀಸ್ ದೌರ್ಜನ್ಯ ಹಾಗೂ ಸುಳ್ಳು ದೂರಿನ ಆರೋಪ).ಮಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಸದ್ಯದ ತನಿಖಾಧಿಕಾರಿಗಳು ತಕ್ಷಣವೇ ಈ ಮೂರೂ ಪ್ರಕರಣಗಳ ಸಮಗ್ರ ಕಡತಗಳನ್ನು ಸಿಐಡಿ ತನಿಖಾಧಿಕಾರಿಗೆ ಹಸ್ತಾಂತರಿಸುವಂತೆ ಡಿಜಿ ಮತ್ತು ಐಜಿಪಿ ಸೂಚನೆ ನೀಡಿದ್ದಾರೆ.
ಅಕ್ಟೋಬರ್ 25 ರಾತ್ರಿ 11 ಗಂಟೆಯ ಸುಮಾರಿಗೆ ಹೊಸಬೆಟ್ಟು ಬೀಚ್‌ಗೆ ಬಂದಿದ್ದ ದೆಹಲಿ ಮೂಲದ ಮಹಿಳೆ ಹಾಗೂ ಕೇರಳ ಮೂಲದ ಯುವಕನನ್ನು ಸೋಮನಾಥ್ ಮತ್ತಿತರರು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ದೆಹಲಿ ಮಹಿಳೆ ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದರು. ಅಂದೇ ರಾತ್ರಿ ಪೊಲೀಸರು ಸೋಮನಾಥ್ ಅವರನ್ನು ಠಾಣೆಗೆ ಕರೆಸಿ ನೋಟಿಸ್ ನೀಡಿ ಕಳುಹಿಸಿದ್ದರು.
ಠಾಣೆಗೆ ತೆರಳಿ ಬಂದ ಎರಡು ದಿನಗಳ ಬಳಿಕ, ಅಂದರೆ ಅಕ್ಟೋಬರ್ 27 ರ ಬೆಳಿಗ್ಗೆ ಸೋಮನಾಥ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. “ಪೊಲೀಸರ ಅತಿಯಾದ ದೌರ್ಜನ್ಯ ಮತ್ತು ಕಿರುಕುಳವೇ ಆತ್ಮಹತ್ಯೆಗೆ ಕಾರಣ” ಎಂದು ಆರೋಪಿಸಿ ಹೊಸಬೆಟ್ಟು ಗ್ರಾಮಸ್ಥರು ಹಾಗೂ ಸ್ಥಳೀಯರು ಮೃತದೇಹವನ್ನು ಹೆದ್ದಾರಿಯಲ್ಲಿಟ್ಟು ಭಾರಿ ಪ್ರತಿಭಟನೆ ನಡೆಸಿದ್ದರು.
ದೆಹಲಿ ಮೂಲದ ಮಹಿಳೆ ಸುಳ್ಳು ದೂರು ನೀಡಿದ್ದಾರೆ ಹಾಗೂ ಪತಿಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಸೋಮನಾಥ್ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವು ದಕ್ಷಿಣಕನ್ನಡ ಜಿಲ್ಲೆಯಲ್ಲಿ ತೀವ್ರ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿರುವುದರಿಂದ, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಸಿಐಡಿಗೆ ವಹಿಸಲಾಗಿದೆ.




