November 4, 2026

ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್ ಪ್ರಯಾಣಿಕರಿಗೆ ದರ ಏರಿಕೆ:

0
image_editor_output_image492561701-1793796632472

ಬೆಂಗಳೂರು: ರಾಜ್ಯದ ಬಸ್ ಪ್ರಯಾಣಿಕರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬರಲಿದೆ. ಕೆಲವು ಮಾರ್ಗಗಳಲ್ಲಿ ಗರಿಷ್ಠ 9 ರೂ.ವರೆಗೆ ಟಿಕೆಟ್ ದರ ಹೆಚ್ಚಳವಾಗಲಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಾರಿಗೆ ನಿಗಮಗಳ ನಿರ್ವಹಣಾ ವೆಚ್ಚ, ಡೀಸೆಲ್ ಬೆಲೆ ಏರಿಕೆ ಹಾಗೂ ನೌಕರರ ವೇತನ ಹೆಚ್ಚಳದಿಂದಾಗಿ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು 26,125 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. 1,03,646 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿದಿನ 24,179 ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುತ್ತಿವೆ. ದಿನನಿತ್ಯ ಸುಮಾರು 1.24 ಕೋಟಿ ಪ್ರಯಾಣಿಕರು ಸಾರಿಗೆ ನಿಗಮಗಳ ಸೇವೆ ಪಡೆಯುತ್ತಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದಲ್ಲಿ ಕೇವಲ ಒಂದು ಬಾರಿ ಮಾತ್ರ ಬಸ್ ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. 2025ರಲ್ಲಿಯೂ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಸಾರಿಗೆ ನಿಗಮಗಳ ಒಟ್ಟು ಕಾರ್ಯಾಚರಣೆಯ ವೆಚ್ಚದಲ್ಲಿ ಸುಮಾರು ಶೇ.80ರಷ್ಟು ಹಣ ಡೀಸೆಲ್ ಮತ್ತು ಸಿಬ್ಬಂದಿ ವೇತನಕ್ಕೆ ಖರ್ಚಾಗುತ್ತಿದೆ. ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 10.47 ರೂ. ಏರಿಕೆಯಾಗಿದ್ದು, ಇದರಿಂದ ನಿಗಮಗಳಿಗೆ ವಾರ್ಷಿಕ ಸುಮಾರು 500 ಕೋಟಿ ರೂ. ಹೆಚ್ಚುವರಿ ಹೊರೆ ಉಂಟಾಗಿದೆ ಎಂದು ಸಚಿವರು ಹೇಳಿದ್ದಾರೆ.

ವಾರ್ಷಿಕವಾಗಿ ಡೀಸೆಲ್ ಖರೀದಿಗೆ 5,694 ಕೋಟಿ ರೂ. ವೆಚ್ಚವಾಗುತ್ತಿದ್ದು, 1,111.88 ಕೋಟಿ ರೂ. ಡೀಸೆಲ್ ಬಾಕಿ ಪಾವತಿಸಬೇಕಿದೆ. 2024ರಲ್ಲಿ ನೌಕರರ ವೇತನ ಹೆಚ್ಚಳ ಮಾಡಲಾಗಿದ್ದು, ಇದರಿಂದ 7,719 ಕೋಟಿ ರೂ. ಹೆಚ್ಚುವರಿ ಹೊಣೆಗಾರಿಕೆ ಉಂಟಾಗಿದೆ. ಅಲ್ಲದೆ, ನಿಗಮಗಳ ಮೇಲೆ 2,192 ಕೋಟಿ ರೂ. ಸಾಲದ ಹೊರೆಯೂ ಇದೆ ಎಂದು ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!