November 4, 2026

ಬಂಟ್ವಾಳ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಸ್ವಚ್ಛತೆ: ಕುಡಿಯುವ ನೀರಿನಲ್ಲಿ ವ್ಯತ್ಯಯ

6e95bb19-ccdf-41a4-adef-f53ce4bf3983

ಬಂಟ್ವಾಳ: ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಪಾಚಿ ಹಾಗೂ ಕೆಸರು ತುಂಬಿಕೊಂಡು, ಅದೇ ಅಶುದ್ಧ ನೀರನ್ನು ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆನ್ನಲ್ಲೇ, ಇದೀಗ ಘಟಕದ ಸ್ವಚ್ಛತಾ ಕಾರ್ಯ ಆರಂಭಗೊಂಡಿದೆ.

ಬಂಟ್ವಾಳ ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಸ್ವಚ್ಛತೆಯ ಕೊರತೆಯಿಂದ ಪಾಚಿ ಹಾಗೂ ಕೆಸರು ಸಂಗ್ರಹವಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಘಟಕಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು. ಘಟಕದೊಳಗೆ ಪಾಚಿ ಹಾಗೂ ಕೆಸರು ತುಂಬಿಕೊಂಡಿರುವುದನ್ನು ಗಮನಿಸಿದ ಅವರು, ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಶುದ್ಧೀಕರಣ ಘಟಕವನ್ನು ಎರಡು ದಿನಗಳೊಳಗೆ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ನಾಗರಿಕರನ್ನು ಒಗ್ಗೂಡಿಸಿಕೊಂಡು ನಾನೇ ಖುದ್ದಾಗಿ ನಿಂತು ಸ್ವಚ್ಛತಾ ಕಾರ್ಯ ಮಾಡಿಸುತ್ತೇನೆ. ಇಲಾಖೆಯಲ್ಲಿ ಸ್ವಚ್ಛತೆಗೆ ಅಗತ್ಯವಿರುವ ಅನುದಾನ ಇಲ್ಲದಿದ್ದರೆ ತಿಳಿಸಿ, ನಾನೇ ವ್ಯವಸ್ಥೆ ಮಾಡಿಸುತ್ತೇನೆ. ಜನರ ಆರೋಗ್ಯದ ವಿಚಾರದಲ್ಲಿ ಇಷ್ಟೊಂದು ನಿರ್ಲಕ್ಷ್ಯ ವಹಿಸುವುದೇಕೆ ಎಂದು ಜಿಲ್ಲಾಧಿಕಾರಿ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದರು.

ಶಾಸಕರ ಈ ಎಚ್ಚರಿಕೆಯ ಬೆನ್ನಲ್ಲೇ ಬುಧವಾರ ಬೆಳಗ್ಗೆಯಿಂದಲೇ ಪುರಸಭೆಯ ಪೌರ ಕಾರ್ಮಿಕರು ಶುದ್ಧೀಕರಣ ಘಟಕದ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ. ಘಟಕದಲ್ಲಿರುವ ಪಾಚಿ, ಕೆಸರು ಹಾಗೂ ಇತರ ತ್ಯಾಜ್ಯಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ.

ಕುಡಿಯುವ ನೀರು ಸಾರ್ವಜನಿಕರ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದ ವಿಚಾರವಾಗಿರುವುದರಿಂದ ಶುದ್ಧೀಕರಣ ಘಟಕದ ನಿರ್ವಹಣೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಕೇವಲ ಸ್ವಚ್ಛತಾ ಕಾರ್ಯಕ್ಕೆ ಸೀಮಿತವಾಗದೆ, ನಿರಂತರ ನಿರ್ವಹಣೆ ಹಾಗೂ ಸಮರ್ಪಕ ಗುಣಮಟ್ಟದ ನೀರು ಪೂರೈಕೆಗೆ ಆದ್ಯತೆ ನೀಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

error: Content is protected !!