November 4, 2026

ಪೊಲೀಸ್ ಪ್ರಧಾನ ಕಚೇರಿ ಎದುರು ಪ್ರತಿಭಟನೆ: ಎಸಿಪಿ ಮನಸ್ವಿ ವಶಿಷ್ಠ ಅಮಾನತು

16d29422-0e97-4d2a-957f-550973407600

ನವದೆಹಲಿ: ದೆಹಲಿ ಪೊಲೀಸ್ ಪ್ರಧಾನ ಕಚೇರಿ ಎದುರು ಪೊಲೀಸ್ ಸಿಬ್ಬಂದಿ ನಡೆಸಿದ ಅನಿರೀಕ್ಷಿತ ಪ್ರತಿಭಟನೆಗೆ ನೇತೃತ್ವ ವಹಿಸಿದ್ದ ಎಸಿಪಿ ಮನಸ್ವಿ ವಶಿಷ್ಠ ಅವರನ್ನು ಕೇಂದ್ರ ಗೃಹ ಸಚಿವಾಲಯವು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಸೋಮವಾರ ನಡೆದ ಪ್ರತಿಭಟನೆಯ ತೀವ್ರತೆಯ ಬೆನ್ನಲ್ಲೇ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಅಕ್ಟೋಬರ್ 23ರಂದು ದೆಹಲಿಯ ಶಹದಾರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ತೀವ್ರ ಘರ್ಷಣೆ ನಡೆದಿತ್ತು. ಈ ಗಲಾಟೆಯಲ್ಲಿ ವಕೀಲ ಲಲಿತ್ ಬನ್ಸಾಲ್ ಗಂಭೀರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ. ಪೊಲೀಸರ ಅನುಚಿತ ವರ್ತನೆ ಖಂಡಿಸಿ ವಕೀಲರು ಪ್ರತಿಭಟನೆ ನಡೆಸಿ, ಅನಿರ್ದಿಷ್ಟಾವಧಿ ಮುಷ್ಕರಕ್ಕೂ ಕರೆ ನೀಡಿದ್ದರು.

ಪರಿಸ್ಥಿತಿಯನ್ನು ತಿಳಿಗೊಳಿಸುವ ಉದ್ದೇಶದಿಂದ ಅಕ್ಟೋಬರ್ 28ರಂದು ಎಸಿಪಿ ಮನಸ್ವಿ ವಶಿಷ್ಠ ಹಾಗೂ ಶಹದಾರ ಠಾಣೆಯ ಇನ್‌ಸ್ಪೆಕ್ಟರ್ ಅರುಣ್ ಕುಮಾರ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆ ಆದೇಶದ ಬೆನ್ನಲ್ಲೇ ವಕೀಲರು ತಮ್ಮ ಮುಷ್ಕರವನ್ನು ಹಿಂಪಡೆದಿದ್ದರು.

ಪೊಲೀಸರಿಂದಲೇ ಪ್ರತಿಭಟನಾ ಧಾಟಿ: ಆದರೆ, ಇಬ್ಬರೂ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ವಿರೋಧಿಸಿ ಸುಮಾರು 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸೋಮವಾರ ದೆಹಲಿ ಪೊಲೀಸ್ ಪ್ರಧಾನ ಕಚೇರಿ ಎದುರು ಮುಗಿಬಿದ್ದು ಪ್ರತಿಭಟನೆ ನಡೆಸಿದರು. ವರ್ಗಾವಣೆಗೊಂಡಿರುವ ಅಧಿಕಾರಿಗಳನ್ನು ಮತ್ತೆ ಹಿಂದಿನ ಹುದ್ದೆಗಳಿಗೇ ಮರುನೇಮಕ ಮಾಡಬೇಕು ಎಂದು ಪಟ್ಟು ಹಿಡಿದರು. ಮಹಿಳಾ ಪೊಲೀಸ್ ಸಿಬ್ಬಂದಿಯೂ ಭಾಗವಹಿಸಿದ್ದ ಈ ಪ್ರತಿಭಟನೆಯಲ್ಲಿ, ‘ಸಮವಸ್ತ್ರಕ್ಕೆ ಆಗುವ ಅವಮಾನವನ್ನು ಸಹಿಸುವುದಿಲ್ಲ’ ಎಂಬ ಘೋಷಣೆಗಳು ಮೊಳಗಿದವು.

error: Content is protected !!