ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ಯುವತಿ ನಿಗೂಢ ಸಾವು
ಪುಣೆ: ಎಂಬಿಎ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದ 34 ವರ್ಷದ ಯುವತಿ ಕುಟುಂಬದವರಿಗೆ ತಿಳಿಸದೆ ಭಾರತಕ್ಕೆ ಮರಳಿದ್ದು, ಪುಣೆಯ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಪುತ್ರಿ ಇನ್ನೂ ಲಂಡನ್‌ನಲ್ಲಿಯೇ ಇದ್ದಾಳೆ ಎಂದು ನಂಬಿದ್ದ ಹೆತ್ತವರು, ಆಕೆಯ ಬ್ಯಾಂಕ್ ಖಾತೆಯ ವಹಿವಾಟು ಪರಿಶೀಲಿಸಿದಾಗ ಫುಡ್ ಡೆಲಿವರಿ ಹಾಗೂ ಆನ್‌ಲೈನ್ ಸೇವೆಗಳಿಗೆ ಹಣ ಪಾವತಿಸಿರುವುದು ಪತ್ತೆಯಾಗಿದೆ. ಈ ವಹಿವಾಟಿನ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿದಾಗ ಪುಣೆಯ ಫ್ಲ್ಯಾಟ್‌ನಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.
ಮೃತ ಯುವತಿಯನ್ನು ಛತ್ರಪತಿ ಸಂಭಾಜಿನಗರ ಮೂಲದ ಮುಗ್ಧಾ ಅವಿನಾಶ್ ದೇಶಮುಖ್ (34) ಎಂದು ಗುರುತಿಸಲಾಗಿದೆ. ಗುರುವಾರ ಪಿಂಪ್ರಿ ಚಿಂಚ್‌ವಾಡ್‌ನ ಗಹುಂಜೆಯಲ್ಲಿರುವ ಲೋಧಾ ಬೆಲ್ಮೊಂಡೊ ವಸತಿ ಸಂಕೀರ್ಣದ ಫ್ಲ್ಯಾಟ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮೃತದೇಹದ ಮೇಲೆ ಯಾವುದೇ ಗೋಚರ ಗಾಯದ ಗುರುತುಗಳು ಕಂಡುಬಂದಿಲ್ಲ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬಕ್ಕೆ ತಿಳಿಸದೆ ಭಾರತಕ್ಕೆ ಮರಳಿದ್ದ ಮುಗ್ಧಾ
ಮುಗ್ಧಾ ಅವರು ಎಂಬಿಎ ವ್ಯಾಸಂಗಕ್ಕಾಗಿ 2025ರ ಜುಲೈನಲ್ಲಿ ಬ್ರಿಟನ್‌ಗೆ ತೆರಳಿದ್ದರು. ಆದರೆ, ಈ ವರ್ಷದ ಆಗಸ್ಟ್‌ನಲ್ಲಿ ಭಾರತಕ್ಕೆ ಮರಳಿದ್ದ ಅವರು, ಕುಟುಂಬದವರಿಗೆ ಯಾವುದೇ ಮಾಹಿತಿ ನೀಡದೆ ಪುಣೆಯಲ್ಲಿ ವಾಸಿಸುತ್ತಿದ್ದರು.
ಮುಗ್ಧಾ ಲಂಡನ್‌ನಲ್ಲಿಯೇ ವ್ಯಾಸಂಗ ಮಾಡುತ್ತಿದ್ದಾರೆ ಎಂದು ನಂಬಿದ್ದ ಕುಟುಂಬದವರು, ಅವರೊಂದಿಗೆ ದೂರವಾಣಿ ಕರೆ ಹಾಗೂ ಸಂದೇಶಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ಆದರೆ, ಅಕ್ಟೋಬರ್ 24ರಂದು ಮುಗ್ಧಾ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು.
ಇದರಿಂದ ಆತಂಕಗೊಂಡ ತಂದೆ ಅವಿನಾಶ್ ದೇಶಮುಖ್ ಅವರು ಲಂಡನ್‌ನಲ್ಲಿರುವ ಪುತ್ರಿಯ ಸ್ನೇಹಿತರೊಬ್ಬರನ್ನು ಸಂಪರ್ಕಿಸಿದ್ದರು. ಅಕ್ಟೋಬರ್ 22ರಂದು ಮುಗ್ಧಾ ಅವರೊಂದಿಗೆ ಕೊನೆಯದಾಗಿ ಸಂದೇಶ ವಿನಿಮಯ ಮಾಡಿಕೊಂಡಿರುವುದಾಗಿ ಸ್ನೇಹಿತೆ ತಿಳಿಸಿದ್ದರು. ಬಳಿಕ ಆ ಸ್ನೇಹಿತೆ ಲಂಡನ್ ಪೊಲೀಸರನ್ನು ಸಂಪರ್ಕಿಸಿ ಮುಗ್ಧಾ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ಮುಗ್ಧಾ ಆಗಸ್ಟ್ ಅಂತ್ಯದ ವೇಳೆಗೆ ಬ್ರಿಟನ್ ತೊರೆದಿರುವ ವಿಚಾರ ತಿಳಿದುಬಂದಿತ್ತು. ಇದರಿಂದ ಮತ್ತಷ್ಟು ಆತಂಕಗೊಂಡ ಕುಟುಂಬದವರು ಭಾರತೀಯ ಅಧಿಕಾರಿಗಳು ಹಾಗೂ ಭಾರತೀಯ ಹೈಕಮಿಷನ್‌ನ ನೆರವು ಕೋರಿದ್ದರು.




