ಸೌಜನ್ಯ ಕೊಲೆ ಪ್ರಕರಣ ಮರುತನಿಖೆ: ಸೌಜನ್ಯ ತಾಯಿ, ಕುಟುಂಬಸ್ಥರ ಭೇಟಿ ಮಾಡಿದ ಎಸ್ಐಟಿ
ಮಂಗಳೂರು: ಕರಾವಳಿಯಲ್ಲಿ ಭಾರಿ ಸಂಚಲನ ಮೂಡಿಸಿರುವ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ‘ವಿಶೇಷ ತನಿಖಾ ತಂಡ’ದ (SIT) ನೂತನ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರು ಮಂಗಳೂರಿಗೆ ಆಗಮಿಸಿದ್ದು, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಮಂಗಳೂರಿನ ಹಳೆ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿರುವ ಎಸ್ಐಟಿ ಕಚೇರಿಗೆ ಸೋಮವಾರ ಭೇಟಿ ನೀಡಿದ ಅವರು, ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಸ್ಥಳದಲ್ಲಿದ್ದು ತನಿಖೆಯ ನೇತೃತ್ವ ವಹಿಸಿದ್ದಾರೆ. ತನಿಖೆ ಚುರುಕುಗೊಂಡ ಬೆನ್ನಲ್ಲೇ, ಸೌಜನ್ಯ ಅವರ ತಾಯಿ ಕುಸುಮಾವತಿ ಸೇರಿದಂತೆ ಕುಟುಂಬದ ಪ್ರಮುಖ ಸದಸ್ಯರು ಹಾಗೂ ಸಾಕ್ಷಿಗಳು ಸೋಮವಾರ ಎಸ್ಐಟಿ ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ವಿಚಾರಣೆಗೆ ಹಾಜರಾದ ಪ್ರಮುಖರು:ಕುಸುಮಾವತಿ (ಸೌಜನ್ಯ ಅವರ ತಾಯಿ)ಪುರಂದರ ಗೌಡ (ಪ್ರಕರಣದ ದೂರುದಾರ ಹಾಗೂ ಸೌಜನ್ಯ ಅವರ ಮಾವ)ವಿಠಲ ಗೌಡ (ಇನ್ನೊಬ್ಬ ಮಾವ)
ಜಗದೀಶ್ ಗೌಡ (ಕುಟುಂಬದ ಸಂಬಂಧಿ)ಯಶೋಧಾ (ಪ್ರಕರಣದ ಪ್ರಮುಖ ಸಾಕ್ಷಿ).
ಎಸ್ಐಟಿ ಅಧಿಕಾರಿಗಳ ತಂಡವು ಸೌಜನ್ಯ ಕುಟುಂಬಸ್ಥರಿಂದ ಮತ್ತೊಮ್ಮೆ ಸುದೀರ್ಘ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆ ಹಾಗೂ ಮಾಹಿತಿಗಳನ್ನು ಪರಿಶೀಲಿಸಿದೆ. ಮಾನ್ಯ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದಂತೆ ಸೌಜನ್ಯ ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರ್ಕಾರವು ಆರಂಭದಲ್ಲಿ ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರ ನೇತೃತ್ವದಲ್ಲಿ ಎಸ್ಐಟಿ ತಂಡವನ್ನು ರಚಿಸಿತ್ತು.
ಆದರೆ, ವೈಯಕ್ತಿಕ ಕಾರಣಗಳನ್ನು ನೀಡಿ ಶಶಿಕುಮಾರ್ ಹಾಗೂ ತಂಡದ ಸದಸ್ಯರಾಗಿದ್ದ ವೆಂಕಟೇಶ್ ಪ್ರಸನ್ನ ಅವರು ತನಿಖಾ ತಂಡದಿಂದ ಹಿಂದೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಹಿರಿಯ ಐಪಿಎಸ್ ಅಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರನ್ನು ಎಸ್ಐಟಿ ನೂತನ ಮುಖ್ಯಸ್ಥರನ್ನಾಗಿ ಹಾಗೂ ಎಸಿಪಿ ಶ್ರೀನಿಧಿ ಅವರನ್ನು ತಂಡದ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು.
ತಂಡದ ಇತರ ಪ್ರಮುಖ ಸದಸ್ಯರಾದ ಸುಧೀರ್ ಕುಮಾರ್ ರೆಡ್ಡಿ ಹಾಗೂ ನಿಶಾ ಜೇಮ್ಸ್ ಅವರು ತನಿಖಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು, ಪ್ರಕರಣದ ನೈಜ ಸತ್ಯಾಂಶಗಳನ್ನು ಹೊರತರುವ ನಿಟ್ಟಿನಲ್ಲಿ ಮರುತನಿಖೆ ಚುರುಕುಗೊಂಡಿದೆ.




