ಪರೋಟ ಸೇವಿಸಿದ 19 ವರ್ಷದ ಯುವಕ ಮೃತ್ಯು
ಕೊಯಮತ್ತೂರು: ಪರೋಟ ಊಟ ಕೆಲ ಆಹಾರ ಪ್ರಿಯರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ಆದರೆ, ಅದೇ ಪರೋಟ ಈ ಸ್ಟೋರಿಯಲ್ಲಿ ಯುವಕನ ಪಾಲಿಗೆ ವಿಲ್ಲನ್ ಆಗಿದ್ದು, ಆತನ ಪ್ರಾಣವನ್ನೇ ಕಸಿದಿದೆ. ಪರೋಟ ತಿಂದ ಬೆನ್ನಲ್ಲೇ ಅಲರ್ಜಿಯ ರಿಯಾಕ್ಷನ್ ನಿಂದ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತ ಯುವಕನನ್ನು ಹೇಮಚಂದ್ರನ್ (19) ಎಂದು ಗುರುತಿಸಲಾಗಿದೆ. ಈತ ತಿರ್ಪ್ಪೂರ್ ಜಿಲ್ಲೆಯ ಕನಕಂಪಾಳ್ಯಂ ಪಟ್ಟಣದ ಕರುವಾಯುರಪ್ಪನ್ ನಗರದ ನಿವಾಸಿ ರಾಮಸಾಮಿ ಎಂಬುವರ ಪುತ್ರ.
ಸುಲೂರು ಬಳಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿಯಾಗಿದ್ದ. ಕನಕಂಪಾಳ್ಯಂ ಪಟ್ಟಣದ ಬಾಡಿಗೆ ಮನೆಯಲ್ಲಿ ಸ್ನೇಹಿತರ ಜತೆ ವಾಸವಿದ್ದ. ಬುಧವಾರ ರಾತ್ರಿ ಹೇಮಚಂದ್ರನ್ ಮತ್ತು ಆತನ ಸ್ನೇಹಿತರು ಊಟಕ್ಕೆಂದು ಪರೋಟ ತಂದು ಸೇವಿಸಿದ್ದರು. ಗುರುವಾರ ಬೆಳಗ್ಗೆ ಹೇಮಚಂದ್ರನ್ ಎಚ್ಚರಗೊಂಡಾಗ ಉಸಿರಾಡಲು ತೊಂದರೆಯಾಗುತ್ತಿದೆ ಅಂತಾ ಹೇಳಿದ್ದಾನೆ. ಇದಾದ ಕೆಲವೇ ಸಮಯದಲ್ಲಿ ಆತ ಕುಸಿದುಬಿದ್ದಿದ್ದಾರೆ. ತಕ್ಷಣ ಆತನನ್ನು ಸ್ನೇಹಿತರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಪ್ರಕರಣ ದಾಖಲಿಸಿಕೊಂಡ ಸುಲೂರು ಪೊಲೀಸರು ಹೇಮಚಂದ್ರನ್ ದೇಹವನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆ (ಸಿಎಂಸಿಎಚ್)ಗೆ ಮರಣೋತ್ತರ ಪರೀಕ್ಷೆಗೆಂದು ರವಾನಿಸಿದ್ದಾರೆ. ಆರು ತಿಂಗಳ ಹಿಂದೆಯೂ ರಾತ್ರಿ ಪರೋಟ ತಿಂದಾಗ ಹೇಮಚಂದ್ರನ್ ಉಸಿರಾಟದ ತೊಂದರೆ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಹೇಮಚಂದ್ರನ್ ಅವರ ಪಾಲಕರು ಮೃತದೇಹದ ಹೆಬ್ಬೆರಳಿನಲ್ಲಿ ಗಾಯದ ಗುರುತನ್ನು ಕಂಡು ಅನುಮಾನ ವ್ಯಕ್ತಪಡಿಸಿದರು. ಆದರೆ, ಆ ಗಾಯ ಸ್ನೇಹಿತರು ಬೈಕ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಸಂಭವಿಸಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.





