March 18, 2026

ಮೂಡಿಗೆರೆ: ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಶವ ಬಾವಿಯಲ್ಲಿ ಪತ್ತೆ

0
n5682182741703427165341dfe7b2b378f0a1ee60f78350340acc8af6ff5ca708cb928d99abd3d6edd4d850.jpg

ಮೂಡಿಗೆರೆ: ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯ ಶವ ಇಂದು ಬಾವಿಯಲ್ಲಿ ಪತ್ತೆಯಾಗಿದೆ.

ಮೃತ ಯುವತಿಯನ್ನು ಜಿ.ಹೊಸಳ್ಳಿ ಗ್ರಾಮದ ಕೃಷ್ಣಮೂರ್ತಿ ಎನ್ನುವವರ ಪುತ್ರಿ ಸೃಷ್ಟಿ (19ವರ್ಷ) ಎನ್ನಲಾಗಿದೆ. ಮೂಡಿಗೆರೆ ತಾಲ್ಲೂಕು ಗೋಣಿಬೀಡು ಠಾಣೆ ವ್ಯಾಪ್ತಿಯ ಜಿ.ಹೊಸಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಸೃಷ್ಟಿ ನಾಪತ್ತೆಯಾಗಿದ್ದಳು. ನಾಪತ್ತೆಯಾದಾಗಿನಿಂದ ಸ್ಥಳೀಯರು ಸೇರಿ ಹುಡುಕಾಟ ನಡೆಸಿದ್ದು ಇಂದು ಬೆಳಿಗ್ಗೆ ಗ್ರಾಮದ ಕುಡಿಯುವ ನೀರು ಯೋಜನೆಯ ಬಾವಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ.

ಸೃಷ್ಟಿ ಹಾಸನದ ಮಹಿಳಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್ ನಿಂದ ಕಾಲೇಜಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ ವಾರ ಮನೆಗೆ ಬಂದಿದ್ದ ಸೃಷ್ಟಿ ಡಿಸೆಂಬರ್ 21 ರ ಗುರುವಾರ ಸಂಜೆ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದಳು. ಸೃಷ್ಟಿಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಲಾಗಿತ್ತು ಆದರೆ ಪತ್ತೆಯಾಗಿರಲಿಲ್ಲ.

ಇಂದು ಮುಂಜಾನೆ ಗ್ರಾಮದ ಕುಡಿಯುವ ನೀರಿನ ಮೋಟರ್ ಅಳವಡಿಸಿರುವ ಬಾವಿಯಲ್ಲಿ ಯುವತಿಯ ಶವ ತೇಲುತ್ತಿರುವುದನ್ನು ವಾಟರ್ ಮ್ಯಾನ್ ಗಮನಿಸಿ ಮಾಹಿತಿ ನೀಡಿದ್ದಾರೆ. ತಂದೆ ತಾಯಿ ಮತ್ತು ಇಬ್ಬರು ಸಹೋದರರನ್ನು ಅಗಲಿರುವ ಸೃಷ್ಟಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗೋಣಿಬೀಡು ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!