ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಗೆ ನುಗ್ಗಲು ಯತ್ನಿಸಿದ ಮಾಲಾಧಾರಿಗಳು: ಪರಿಸ್ಥಿತಿ ಉದ್ವಿಗ್ನ
ಮಂಡ್ಯ: ಇಂದು ಶ್ರೀರಂಗಪಟ್ಟಣದ ಜಾಮೀಯಾ ಮಸೀದಿ ಬಳಿಯಲ್ಲಿ ಸಂಕೀರ್ತನಾ ಯಾತ್ರೆ ಸಾಗುತ್ತಿದ್ದಂತ ಸಂದರ್ಭದಲ್ಲಿ ಮಾಲಾಧಾರಿಗಳು ಮಸೀದಿಯ ಬಳಿಯಲ್ಲೇ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದ್ದಾರೆ. ಅಲ್ಲದೇ ಮಸೀದಿ ಬಳಿಯಲ್ಲಿ ನಿಲ್ಲಲು ಬಿಡದೇ ಇದ್ದಕ್ಕೆ ಆಕ್ರೋಶವನ್ನು ಹೊರ ಹಾಕಿದ್ದಾರೆ. ಈಗಾಗಿ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರೋದಾಗಿ ತಿಳಿದು ಬಂದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮೀಯಾ ಮಸೀದಿಯ ಬಳಿಗೆ ಸಂಕೀರ್ತನಾ ಯಾತ್ರೆ ತಲುಪಿದೆ. ಈ ಸಂದರ್ಭದಲ್ಲಿ ಮಸೀದಿಯ ಬಳಿಯಲ್ಲಿ ಕೆಲ ಹೊತ್ತು ನಿಲ್ಲೋದಕ್ಕೆ ಮಾಲಾಧಾರಿಗಳು ಪ್ರಯತ್ನಿಸಿದ್ದಾರೆ. ಆದ್ರೇ ಇದಕ್ಕೆ ಪೊಲೀಸರು ಅವಕಾಶ ಕೊಡದೇ ಅಲ್ಲಿಂದ ಮುಂದೆ ಸಾಗೋದಕ್ಕೆ ಸೂಚಿಸಿದ್ದಾರೆ.
ಪೊಲೀಸರ ಜೊತೆಗೆ ಈ ವೇಳೆ ಮಾಲಾಧಾರಿಗಳು ವಾಗ್ವಾದಕ್ಕೆ ಇಳಿದಿದ್ದಾರೆ. ಪೊಲೀಸರು ಹಾಗೂ ಮಾಲಾಧಾರಿಗಳ ನಡುವೆ ಕೆಲ ಕಾಲ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಮಸೀದಿಯ ಮುಂದೆ ಮಾಲಾಧಾರಿಗಳು ಜೈ ಶ್ರೀರಾಮ್, ಹನುಮಾನ್ ಎಂಬುದಾಗಿ ಘೋಷಣೆ ಕೂಗಿದ್ದಾರೆ.
ಯಾತ್ರೆ ಜಾಮಿಯಾ ಮಸೀದಿ ಬಳಿಗೆ ಬಂದಾಗ ಹನುಮ ಮಾಲಾಧಾರಿಗಳು, ರಸ್ತೆಯಲ್ಲಿ ಕುಳಿತು ಮಸೀದಿ ಜಾಗ ನಮ್ಮದು, ಮಂದಿರ ಕಟ್ಟುತ್ತೇವೆ. ಆಂಜನೇಯ ದೇಗುಲ ಕೆಡವಿ ಮಸೀದಿ ಕಟ್ಟಲಾಗಿದೆ. ನಮಗೆ ನ್ಯಾಯ ಬೇಕು ಎಂದು ಪಟ್ಟುಹಿಡಿದರು ಎನ್ನಲಾಗಿದೆ.
ಇದಷ್ಟೇ ಅಲ್ಲದೇ ಮಸೀದಿಯ ಮುಂದೆ ಕರ್ಪೂರ ಹಚ್ಚಿ, ಮಾಲಾಧಾರಿಗಳು ಪೂಜೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಾಲಾಧಾರಿಗಳನ್ನು ನಿಯಂತ್ರಿಸೋದಕ್ಕೆ ಪೊಲೀಸರು ಹರಸಾಹಸ ಪಡುವಂತಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.





