ಬಿಹಾರ: ನಕಲಿ ಮಧ್ಯ ಸೇವಿಸಿ 8 ಮಂದಿ ಮೃತ್ಯು
ಬಿಹಾರ: ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಕನಿಷ್ಠ ಎಂಟು ಮಂದಿ ಪ್ರಾಣ ಕಳೆದುಕೊಂಡ ಘಟನೆ ನೌತನ್ ಪೊಲೀಸ್ ಠಾಣೆ ವ್ಯಾಪ್ತಿಯ ತೆಲ್ಹುವಾ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಮೃತರಲ್ಲಿ ಒಬ್ಬರಾದ ಪ್ರಹ್ಲಾದ್ ಯಾದವ್ ಅವರ ಪುತ್ರನ ಪ್ರಕಾರ, ಅವರ ತಂದೆ ಮದ್ಯ ಸೇವಿಸಿ ಮನೆಗೆ ಬಂದ ನಂತರ ಅವರ ಸ್ಥಿತಿ ಹದಗೆಡಲು ಪ್ರಾರಂಭಿಸಿತು, ನಂತರ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಮಾರ್ಗಮಧ್ಯೆ ಅವರು ಸಾವನ್ನಪ್ಪಿದರು.
ನಕಲಿ ಮಧ್ಯ ದುರಂತದಲ್ಲಿ 8 ಜನರ ಸಾವು ಸ್ಥಳೀಯ ಆಡಳಿತವನ್ನು ಕಂಗಾಲು ಮಾಡಿದೆ. ಮೂಲಗಳ ಪ್ರಕಾರ, ಜಿಲ್ಲಾಡಳಿತವು ಸಂಪೂರ್ಣ ತನಿಖೆ ನಡೆಸುತ್ತಿದೆ, ಆದರೆ ಇದುವರೆಗೆ ಎಲ್ಲಾ ಸಾವುಗಳು ಕಲಬೆರಕೆ ಮದ್ಯ ಸೇವಿಸಿದ ಕಾರಣವೇ ಎಂಬುದು ದೃಢಪಟ್ಟಿಲ್ಲ.
ಅಕ್ಟೋಬರ್ 30 ರಂದು ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಮದ್ಯ ಸೇವಿಸಿ ಐವರು ಸಾವನ್ನಪ್ಪಿದ್ದರು ಮತ್ತು ಹಲವರು ಅಸ್ವಸ್ಥರಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪಂಚಾಯತ್ ಸಮಿತಿಯ ಸದಸ್ಯ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಗೋಪಾಲ್‌ಗಂಜ್‌ನಲ್ಲಿ ನಡೆದ ದುರಂತದ ಪ್ರಕರಣದಲ್ಲಿ 8 ಜನರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದರು. ಈ ವರ್ಷದ ಜುಲೈನಲ್ಲಿ ಪಶ್ಚಿಮ ಚಂಪಾರಣ್‌ನಲ್ಲಿ ನಕಲಿ ಮದ್ಯ ಸೇವಿಸಿ 16 ಮಂದಿ ಸಾವನ್ನಪ್ಪಿದ್ದರು.





