ವಿರಾಟ್ ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ:
ವಿವರಣೆ ಕೇಳಿದ ಡಿಸಿಡಬ್ಯೂ
ದೆಹಲಿ: ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಅವರ 9 ತಿಂಗಳ ಹಸುಗೂಸಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ದೆಹಲಿ ಮಹಿಳಾ ಆಯೋಗ ವಿವರಣೆಯನ್ನು ಕೇಳಿದೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿತ್ತು. ಪಂದ್ಯದ ಸೋಲಿಗೆ ಶಮಿ ಕಾರಣ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ನಿಂದನೆ ವ್ಯಕ್ತಪಡಿಸಿದ ಸಂದರ್ಭದಲ್ಲಿ ವಿರಾಟ್ ಶಮಿಯ ಪರವಾಗಿ ಹೇಳಿಕೆ ನೀಡಿದರು. ನಂತರದಲ್ಲಿ ಟ್ವಿಟರ್ ನಲ್ಲಿ ವ್ಯಕ್ತಿಯೋರ್ವ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಮಗುವಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ.
ಈ ಘಟನೆಯ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿಯ ಮಹಿಳಾ ಆಯೋಗ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿರುವುದು, ಆರೋಪಿಯ ಗುರುತು, ಬಂಧನ, ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವಿವರವಾಗಿ ನ.08 ರ ವೇಳೆಗೆ ತಿಳಿಸಬೇಕೆಂದು ದೆಹಲಿಯ ಡಿಸಿಪಿ ಅವರನ್ನು ಕೇಳಿದೆ.
ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಟ್ವಿಟರ್ ಹ್ಯಾಂಡಲ್ ಈಗ ಡಿಲೀಟ್ ಆಗಿದೆ. ಆ ವ್ಯಕ್ತಿಯ ಗುರುತನ್ನು ಇನ್ನಷ್ಟೇ ಪತ್ತೆ ಮಾಡಬೇಕಿದ್ದು, ಸ್ಕ್ರೀನ್ ಶಾಟ್ ಗಳು ವೈರಲ್ ಆಗತೊಡಗಿವೆ.






