ಸ್ಟೇಡಿಯಂನಲ್ಲಿ ಫುಟ್ಬಾಲ್ ಪಂದ್ಯದ ವೇಳೆ ಕಾಲ್ತುಳಿತ:
6 ಮಂದಿ ಮೃತ್ಯು, ಹಲವರಿಗೆ ಗಾಯ
ಕ್ಯಾಮರೂನ್: ಯೌಂಡೆ ಕ್ಯಾಮರೂನ್ ದೇಶದಲ್ಲಿ ಆಫ್ರಿಕನ್ ಕಪ್ ಆಫ್ ನೇಷನ್ಸ್ ಫುಟ್‌ಬಾಲ್ ಪಂದ್ಯವನ್ನು ಆಯೋಜಿಸಿದ್ದ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಫ್ರಿಕಾದ ಅಗ್ರ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊನೆಯ 16 ನಾಕೌಟ್ ಪಂದ್ಯದಲ್ಲಿ ಆತಿಥೇಯ ದೇಶವು ಕೊಮೊರೊಸ್ ಆಡುವುದನ್ನು ವೀಕ್ಷಿಸಲು ಕ್ಯಾಮರೂನ್ ರಾಜಧಾನಿ ಯೌಂಡೆಯಲ್ಲಿರುವ ಒಲೆಂಬೆ ಕ್ರೀಡಾಂಗಣಕ್ಕೆ ಪ್ರವೇಶ ಪಡೆಯಲು ಪ್ರೇಕ್ಷಕರು ಹೆಣಗಾಡುತ್ತಿರುವಾಗ ಕಾಲ್ತುಳಿತ ಸಂಭವಿಸಿದೆ.
ಕಾಲ್ತುಳಿತದಿಂದ 6 ಮಂದಿ ಸಾವನ್ನಪ್ಪಿದ್ದು, ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಕ್ರೀಡಾಂಗಣವು 60,000 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಕೋವಿಡ್ ಕಾರಣದಿಂದಾಗಿ 80% ಕ್ಕಿಂತ ಹೆಚ್ಚು ಪ್ರೇಕ್ಷಕರಿಗೆ ಅವಕಾಶ ನೀಡಿರಲಿಲ್ಲ. ಆದರೂ ಸುಮಾರು 50,000 ಜನರು ಪಂದ್ಯಕ್ಕೆ ಹಾಜರಾಗಲು ಪ್ರಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ಹೊರತಾಗಿಯೂ ನಾಕೌಟ್ ಹಂತದ ಪಂದ್ಯವು ಮುಂದುವರಿಯಿತು ಮತ್ತು ಆತಿಥೇಯ ಕ್ಯಾಮರೂನ್ ಹತ್ತು ಮಂದಿಯ ಕೊಮೊರೊಸ್ ವಿರುದ್ಧ 2-1 ಗೆಲುವಿನೊಂದಿಗೆ ಪಂದ್ಯಾವಳಿಯ ಕ್ವಾರ್ಟರ್-ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಕಾಯ್ದಿರಿಸಿತು.




