ಮತ್ತೊಂದು ವಿಮಾನ ಪತನ: ಸಂಸದ ಸೇರಿ 15 ಮಂದಿ ಸಾವು
ಬೊಗೋಟಾ: ಸಂಸದ ಸೇರಿದಂತೆ 15 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಪತನಗೊಂಡು ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ ಘಟನೆ ಬುಧವಾರ ಕೊಲಂಬಿಯಾ-ವೆನೆಜುವೆಲಾದ ಗಡಿಯ ಬಳಿ ನಡೆದಿದೆ.
ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಈ ವಿಮಾನವು ಗಡಿ ನಗರವಾದ ಕುಕುಟಾದಿಂದ ಹೊರಟು, ಮಧ್ಯಾಹ್ನದ ಸುಮಾರಿಗೆ ಹತ್ತಿರದ ಓಕಾನಾದಲ್ಲಿ ಇಳಿಯುವಾಗ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ. ದುರಂತದಲ್ಲಿ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಕೊಲಂಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ಮಾಹಿತಿ ನೀಡಿದೆ.
ಬೀಚ್‌ಕ್ರಾಫ್ಟ್ 1900 ಟ್ವಿನ್-ಪ್ರೊಪೆಲ್ಲರ್ ದುರಂತಕ್ಕೀಡಾದ ಫ್ಲೈಟ್. ವಿಮಾನದಲ್ಲಿ 13 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು.
ವಿಮಾನವನ್ನು ಹುಡುಕಲು ಮತ್ತು ಶವಗಳನ್ನು ಹೊರತೆಗೆಯಲು ಸರ್ಕಾರ ವಾಯುಪಡೆಯನ್ನು ನಿಯೋಜಿಸಿತು. ಕೊಲಂಬಿಯಾದ ಚೇಂಬರ್ ಆಫ್ ಡೆಪ್ಯೂಟೀಸ್‌ನ ಸದಸ್ಯರಾದ ಕ್ವಿಂಟೆರೊ ಹಾಗೂ ಮುಂಬರುವ ಚುನಾವಣಾ ಅಭ್ಯರ್ಥಿಯಾದ ಸಾಲ್ಸೆಡೊ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.




