ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿ ತೆರೆಯುವುದಿಲ್ಲ: ಇರಾನ್
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನ ಪರಿಸ್ಥಿತಿ ನಡುವೆ ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಕಠಿಣ ಎಚ್ಚರಿಕೆ ನೀಡಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ರಾಷ್ಟ್ರದ ಭದ್ರತೆ ಹಾಗೂ ಸ್ವಾಯತ್ತತೆಗೆ ಧಕ್ಕೆ ಉಂಟಾದರೆ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿ ತೆರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ.
ಖಾಮೆನೆಇ ಅವರ ಮೊದಲ ಸಾರ್ವಜನಿಕ ಸಂದೇಶವನ್ನು ಗುರುವಾರ ಇರಾನ್‌ನ ರಾಜ್ಯ ದೂರದರ್ಶನದಲ್ಲಿ ಸುದ್ದಿ ನಿರೂಪಕರು ಓದಿದ್ದಾರೆ. ಆದರೆ ಅವರು ಸ್ವತಃ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಲಿಲ್ಲ. ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸೇನಾ ಚಟುವಟಿಕೆಗಳು ಮುಂದುವರಿದರೆ, ಆ ನೆಲೆಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ ಎಂಬ ಮಾಹಿತಿ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಪ್ರದೇಶದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ತಕ್ಷಣವೇ ಮುಚ್ಚಬೇಕು ಎಂಬುದಾಗಿ ಕೂಡ ಅವರು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
“ಪ್ರತಿ ಸಾವಿಗೂ ಪ್ರತೀಕಾರ ತೀರಿಸಲಾಗುತ್ತದೆ. ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿಗಳು ಮುಂದುವರಿಯುತ್ತವೆ” ಎಂದು ಅವರು ಹೇಳಿರುವುದಾಗಿ ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳು ಉಲ್ಲೇಖಿಸಿವೆ. ಇದಕ್ಕೂ ಮೊದಲು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅಮೆರಿಕಾ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷವನ್ನು ಕೊನೆಗೊಳಿಸಲು ಮೂರು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಯಾವುದೇ ಒಪ್ಪಂದದಲ್ಲಿ ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು, ಮುಂದಿನ ದಿನಗಳಲ್ಲಿ ದೇಶದ ಮೇಲೆ ದಾಳಿಗಳು ನಡೆಯದಂತೆ ಖಾತರಿ ನೀಡಬೇಕು ಹಾಗೂ ಯುದ್ಧದಿಂದ ಉಂಟಾದ ಹಾನಿಗೆ ಪರಿಹಾರ ನೀಡಬೇಕು ಎಂದು ಅವರು ಹೇಳಿದ್ದಾರೆ.
ರಷ್ಯಾ ಹಾಗೂ ಪಾಕಿಸ್ತಾನದ ನಾಯಕರೊಂದಿಗೆ ಮಾತನಾಡಿದ ಬಳಿಕ ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಇರಾನ್ ಬದ್ಧವಾಗಿದೆ ಎಂದು ಪೆಜೆಶ್ಕಿಯಾನ್ ಹೇಳಿದ್ದಾರೆ ಎಂದು ವಿವಿಧ ಮಾಧ್ಯಮ ವರದಿಗಳು ತಿಳಿಸಿವೆ. ಜಿಯೋನಿಸ್ಟ್ ಆಡಳಿತ ಮತ್ತು ಅಮೆರಿಕದಿಂದ ಪ್ರಚೋದಿತವಾದ ಈ ಯುದ್ಧವನ್ನು ಕೊನೆಗೊಳಿಸಲು ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಒಪ್ಪಿಕೊಳ್ಳುವುದು, ಪರಿಹಾರ ನೀಡುವುದು ಹಾಗೂ ಭವಿಷ್ಯದ ಆಕ್ರಮಣದ ವಿರುದ್ಧ ದೃಢವಾದ ಅಂತರರಾಷ್ಟ್ರೀಯ ಖಾತರಿಗಳನ್ನು ನೀಡುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.




