ಧರ್ಮ ಸಂಸದ್ ನಲ್ಲಿ ದ್ವೇಷ ಭಾಷಣ:
ನಾಗರಿಕರು, ಸಶಸ್ತ್ರ ಪಡೆಗಳ ಯೋಧರು ಸೇರಿ 100 ಕ್ಕೂ ಹೆಚ್ಚು ಜನರಿಂದ ರಾಷ್ಟ್ರಪತಿ, ಪ್ರಧಾನಿ ಗೆ ಪತ್ರ

ನವದೆಹಲಿ: ಹರಿದ್ವಾರದಲ್ಲಿ ಈಚೆಗೆ ನಡೆದಿದ್ದ ಧರ್ಮ ಸಂಸತ್‌ನಲ್ಲಿ, ಮುಸ್ಲಿಮರ ಹತ್ಯಾಕಾಂಡಕ್ಕೆ ಧಾರ್ಮಿಕ ಗುರುಗಳು ಕರೆ ನೀಡಿದ್ದರ ವಿರುದ್ಧ ಸೇನಾಪಡೆಗಳ ಐವರು ನಿವೃತ್ತ ಮುಖ್ಯಸ್ಥರೂ ಸೇರಿ 100ಕ್ಕೂ ಹೆಚ್ಚು ಜನರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ಎನ್‌ಡಿ ಟಿ.ವಿ. ವರದಿ ಮಾಡಿದೆ.
ಮೂರು ದಿನಗಳ ಧರ್ಮ ಸಂಸತ್‌ನಲ್ಲಿ ಕಾರ್ಯಕ್ರಮದಲ್ಲಿ ಹಿಂದೂ ಸಾಧುಗಳು ಮತ್ತು ಇತರ ನಾಯಕರು ಮಾಡಿದ ಭಾಷಣದ ವಸ್ತು ಕೇಳಿ ನಾವು ವಿಚಲಿತರಾಗಿದ್ದೇವೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಅಲ್ಲಿ, ಪದೇ ಪದೇ ಕರೆ ನೀಡಲಾಯಿತು. ಹಿಂದೂ ಧರ್ಮವನ್ನು ಕಾಪಾಡಲು ಅಗತ್ಯ ಬಂದರೆ ಶಸ್ತ್ರಗಳನ್ನು ಹಿಡಿದು ಮುಸ್ಲಿಮರನ್ನು ಹತ್ಯೆಮಾಡಿ ಎಂದು ಕರೆ ನೀಡಲಾಯಿತು. ಈ ರೀತಿ ಹಿಂಸೆಗೆ ಪ್ರಚೋದನೆ ನೀಡಲು ನಾವು ಅನುವು ಮಾಡಿಕೊಡಬಾರದು. ಈ ರೀತಿಯ ಪ್ರಚೋದನೆಗಳು ಆಂತರಿಕ ಭದ್ರತೆಯನ್ನು ಮಾತ್ರ ಹಾಳುಮಾಡುವುದಲ್ಲದೆ, ಜೊತೆಗೆ ದೇಶದ ಸಾಮಾಜಿಕ ಸಂರಚನೆಗೂ ಹಾನಿ ಉಂಟುಮಾಡುತ್ತವೆ’ ಎಂದು ಪತ್ರದಲ್ಲಿ ಹೇಳಲಾಗಿದೆ.
‘ಮುಸ್ಲಿಮರ ವಿರುದ್ಧ ಶಸ್ತ್ರ ಕೈಗೆತ್ತಿಕೊಳ್ಳುವಂತೆ ಪೊಲೀಸರು ಮತ್ತು ಸೈನಿಕರಿಗೂ ಕರೆ ನೀಡಲಾಗಿದೆ. ಇವೆಲ್ಲವನ್ನು ತಡೆಗಟ್ಟಲು ನೀವು ಮಧ್ಯಪ್ರವೇಶಿಸಬೇಕು’ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.