March 19, 2026

ಉಜಿರೆ ಅನೈತಿಕ ಪೊಲೀಸ್ ಗಿರಿ ಪ್ರಕರಣ: SDPI ತೀವ್ರ ಖಂಡನೆ

0
image_editor_output_image1678064150-1773909013838.jpg

ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದ ಅಪ್ರಾಪ್ತ ಮುಸ್ಲಿಂ ಬಾಲಕನ ಅಪಹರಣೆ, ಅಮಾನುಷ ಹಲ್ಲೆ ಮತ್ತು ಆತ್ಮಹತ್ಯೆಗೆ ಪ್ರೇರೇಪಿಸಿದ ಘಟನೆ ಅತ್ಯಂತ ಕ್ರೂರ, ಮಾನವೀಯತೆಯಿಲ್ಲದ ಹಾಗೂ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತದ್ದಾಗಿದೆ. ಧಾರ್ಮಿಕ ಕಾರ್ಯಕ್ರಮಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಅಪ್ರಾಪ್ತ ಬಾಲಕನನ್ನು ಧರ್ಮದ ಆಧಾರದ ಮೇಲೆ ಗುರುತಿಸಿ ಹಲ್ಲೆ ನಡೆಸಿರುವುದು ಸಂಘಟಿತ ದ್ವೇಷ ರಾಜಕಾರಣದ ಪ್ರತಿಫಲವಾಗಿದೆ. “ಅನೈತಿಕ ಪೊಲೀಸ್ ಗಿರಿ” ಎಂಬ ಹೆಸರಿನಲ್ಲಿ ಕೆಲ ಸಂಘಪರಿವಾರದ ಕಾರ್ಯಕರ್ತರು ಕಾನೂನನ್ನು ಕೈಗೆತ್ತಿಕೊಂಡು ನಿರಪರಾಧ ಯುವಕರ ಮೇಲೆ ದೌರ್ಜನ್ಯ ಎಸಗುತ್ತಿರುವುದು ಅತ್ಯಂತ ಖಂಡನೀಯ ಎಂದು ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕನನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಗುಂಪಾಗಿ ಹಲ್ಲೆ ನಡೆಸಿರುವುದು ಹಾಗೂ ಬಳಿಕ ಜೀವಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿರುವುದು ಗಂಭೀರ ಅಪರಾಧವಾಗಿದ್ದು, ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಗಳಾದ ಗೌರವ್ ಶೆಟ್ಟಿ, ರಮೇಶ್ ಸೇರಿದಂತೆ ಸಂಬಂಧಪಟ್ಟ ಎಲ್ಲರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು SDPI ಆಗ್ರಹಿಸುತ್ತದೆ. ಜೊತೆಗೆ, ಇಂತಹ ಸಂಘಟಿತ ದಾಳಿಗಳ ಹಿಂದೆ ಇರುವ ಶಕ್ತಿಗಳನ್ನು ಪತ್ತೆಹಚ್ಚಿ ಸಂಪೂರ್ಣವಾಗಿ ನಿಗ್ರಹಿಸಬೇಕು. ರಾಜ್ಯದಲ್ಲಿ ಹೆಚ್ಚುತ್ತಿರುವ “ಅನೈತಿಕ ಪೊಲೀಸ್ ಗಿರಿ” ಕೃತ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅಪ್ರಾಪ್ತರು ಮತ್ತು ಅಲ್ಪಸಂಖ್ಯಾತ ಸಮುದಾಯದ ಸುರಕ್ಷತೆಯನ್ನು ಖಚಿತಪಡಿಸಬೇಕಾಗಿದೆ.

ಕಾನೂನು ಕೈಗೆತ್ತಿಕೊಳ್ಳುವ ಪ್ರವೃತ್ತಿಯನ್ನು ಕಟ್ಟುನಿಟ್ಟಾಗಿ ತಡೆಯದಿದ್ದರೆ ಸಮಾಜದಲ್ಲಿ ಭಯ ಮತ್ತು ಅಶಾಂತಿ ಹೆಚ್ಚುವ ಅಪಾಯವಿದೆ. ಈ ಅಮಾನುಷ ಘಟನೆಯನ್ನು SDPI ತೀವ್ರವಾಗಿ ಖಂಡಿಸುತ್ತದೆ ಹಾಗೂ ಸಂತ್ರಸ್ತ ಬಾಲಕನಿಗೆ ನ್ಯಾಯ ದೊರಕುವವರೆಗೆ ಹೋರಾಟ ನಡೆಸುವುದಾಗಿ ನವಾಝ್ ಕಟ್ಟೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!