ಬಿಜೆಪಿ ಗೆ ಸೇರಿದ ಮಾಜಿ ಡಿಎಂಕೆ ವ್ಯಕ್ತಿಯ ಹತ್ಯೆ

ಈರೋಡ್: ಡಿಎಂಕೆಗೆ ಸೇರಿದ್ದ ಮಾಜಿ ಕೌನ್ಸಿಲರ್‌ವೊಬ್ಬರು ಬಿಜೆಪಿ ಕಾರ್ಯಕರ್ತನ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದು, ಶುಕ್ರವಾರ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೃತ್ತಿಯಲ್ಲಿ ಟೈಲರ್ ಆಗಿದ್ದ ವಡಿವೇಲ್ (50) ಎನ್ನುವವರು ಡಿಎಂಕೆ ತೊರೆದು ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿದ್ದರು.
ಇದು ಡಿಎಂಕೆಯ ಮಾಜಿ ಪಾಲಿಕೆ ಸದಸ್ಯ ಈಶ್ವರಮೂರ್ತಿ ಅವರನ್ನು ಕೆರಳಿಸಿತ್ತು ಎನ್ನಲಾಗಿದೆ. ಈ ಬಗ್ಗೆ ಇವರಿಬ್ಬರ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು.
ಇಲ್ಲಿನ ತಾಳವುಮಲೈ ಎಂಬಲ್ಲಿ ಗುರುವಾರ ವಡಿವೇಲ್ ಅವರು ತಮ್ಮ ಸ್ನೇಹಿತರೊಂದಿಗೆ ನಿಂತಿದ್ದಾಗ ಈಶ್ವರಮೂರ್ತಿ ವಾಗ್ವಾದ ನಡೆಸಿದ್ದರು. ಇದೇ ವೇಳೆ ಈಶ್ವರ, ವಡಿವೇಲ್ ಮೇಲೆ ಕಲ್ಲು ತೂರಿದ್ದರು.
ಗಾಯಗೊಂಡು ಕೆಳಗೆ ಬಿದ್ದಿದ್ದ ವಡಿವೇಲು ಅವರನ್ನು ರಕ್ಷಿಸಿದ್ದ ಸ್ನೇಹಿತರು ನೀರು ಕುಡಿಸಿ ಮನೆಗೆ ಬಿಟ್ಟುಬಂದಿದ್ದರು. ನಿತ್ರಾಣಗೊಂಡಿದ್ದ ಅವರು ಶುಕ್ರವಾರ ಬೆಳಿಗ್ಗೆ ಹಾಸಿಗೆಯಲ್ಲಿಯೇ ಮೃತಪಟ್ಟಿರುವುದನ್ನು ಕಂಡ ಅವರ ಪತ್ನಿ, ಗಂಡನ ಅನುಮಾನಾಸ್ಪದ ಸಾವಿನ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಸಾವಿನ ಸುದ್ದಿ ತಿಳಿದ ಬಿಜೆಪಿ ಕಾರ್ಯಕರ್ತರು ಈಶ್ವರಮೂರ್ತಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ, ಮರಣೋತ್ತರ ಪರೀಕ್ಷೆ ವರದಿ ನಂತರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.