ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆಯಲು ಎರಡು ಬಾರಿ ವಿಫಲ ಯತ್ನ
ಬೆಂಗಳೂರು/ವಾರಣಾಸಿ: ಬೆಂಗಳೂರಿನಿಂದ ವಾರಣಾಸಿಗೆ ಹೊರಟಿದ್ದ ಇಂಡಿಗೋ ವಿಮಾನವೊಂದು ಭೀಕರ ಅನಾಹುತದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ.
ವಿಮಾನವು ನಡು ಆಕಾಶದಲ್ಲಿ ಹಾರಾಟ ನಡೆಸುತ್ತಿದ್ದಾಗ ಪ್ರಯಾಣಿಕನೊಬ್ಬ ತುರ್ತು ನಿರ್ಗಮನದ ಬಾಗಿಲು ತೆರೆಯಲು ಎರಡು ಬಾರಿ ವಿಫಲ ಯತ್ನ ನಡೆಸಿದ್ದು, ವಿಮಾನದಲ್ಲಿದ್ದ 180ಕ್ಕೂ ಹೆಚ್ಚು ಪ್ರಯಾಣಿಕರಲ್ಲಿ ಸಾವಿನ ಭೀತಿ ಆವರಿಸಿತ್ತು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶನಿವಾರ ರಾತ್ರಿ ಟೇಕ್ ಆಫ್ ಆಗಿದ್ದ IndiGo 6E-185 ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ಆರೋಪಿಯನ್ನು ಉತ್ತರ ಪ್ರದೇಶದ ಮೌ ಜಿಲ್ಲೆಯ 22 ವರ್ಷದ ಮೊಹಮ್ಮದ್ ಅದ್ನಾನ್ ಎಂದು ಗುರುತಿಸಲಾಗಿದೆ.
ವಿಮಾನ ಹಾರಾಟ ಆರಂಭಿಸಿ ಕೇವಲ 15 ನಿಮಿಷ ಕಳೆದಿತ್ತು. ಸೀಟ್ ಬೆಲ್ಟ್ ಚಿಹ್ನೆ ಆಫ್ ಆಗುತ್ತಿದ್ದಂತೆಯೇ ಅದ್ನಾನ್ ತನ್ನ ಸೀಟಿನಿಂದ ಎದ್ದು ನೇರವಾಗಿ ಎಮರ್ಜೆನ್ಸಿ ಹ್ಯಾಂಡಲ್ ಬಳಿ ತೆರಳಿ ಅದನ್ನು ಎಳೆಯಲು ಯತ್ನಿಸಿದ್ದಾನೆ.
ತಕ್ಷಣ ಎಚ್ಚೆತ್ತ ವಿಮಾನದ ಸಿಬ್ಬಂದಿ ಆತನನ್ನು ತಡೆದು ಎಚ್ಚರಿಕೆ ನೀಡಿದ್ದರು. ವಿಮಾನವು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಲು ಇಳಿಯುತ್ತಿದ್ದಾಗ (Descent), ಆತ ಮತ್ತೆ ಹಠಾತ್ ಆಗಿ ಬಾಗಿಲು ತೆರೆಯಲು ಮುಂದಾಗಿದ್ದಾನೆ. ಈ ವೇಳೆ ಸಹ-ಪ್ರಯಾಣಿಕರು ಆತನನ್ನು ಹಿಡಿದು ಬಲವಂತವಾಗಿ ಸೀಟಿಗೆ ಕೂರಿಸಿದ್ದಾರೆ.
ವಿಮಾನವು ಸುರಕ್ಷಿತವಾಗಿ ಇಳಿದ ನಂತರ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ವಶಕ್ಕೆ ಪಡೆದಾಗ ಆರೋಪಿ ನೀಡಿದ ಹೇಳಿಕೆ ಪೊಲೀಸರನ್ನು ದಂಗಾಗಿಸಿದೆ. ತನಗೆ “ದೆವ್ವ ಹಿಡಿದಿದೆ“ ಹಾಗೂ ತಾನು ಏನು ಮಾಡುತ್ತಿದ್ದೇನೆಂಬ ಅರಿವಿಲ್ಲದೆ ಹೀಗೆ ಮಾಡಿದ್ದೇನೆ ಎಂದು ಆತ ಸಮರ್ಥಿಸಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರವೇ ಆತ ಮಾನಸಿಕ ಅಸ್ವಸ್ಥನೇ ಅಥವಾ ಅಮಲಿನಲ್ಲಿದ್ದನೇ ಎಂಬುದು ಸ್ಪಷ್ಟವಾಗಬೇಕಿದೆ.




